ADVERTISEMENT

ರಷ್ಯಾಗೆ ನುಗ್ಗಿ 600 ಕಿ.ಮೀ ಸಂಚರಿಸಿತೇ ಉಕ್ರೇನ್ ಡ್ರೋನ್?

ಪಿಟಿಐ
Published 27 ಡಿಸೆಂಬರ್ 2022, 3:07 IST
Last Updated 27 ಡಿಸೆಂಬರ್ 2022, 3:07 IST
   

ಕೀವ್: ರಷ್ಯಾದ ಕೇಂದ್ರ ಭಾಗದಲ್ಲಿರುವ ಎಂಗೆಲ್ಸ್ ವಾಯುನೆಲೆಯಲ್ಲಿ ಉಕ್ರೇನ್‌ನ ಡ್ರೋನ್ ಅನ್ನು ಹೊಡೆದುರುಳಿಸಿರುವುದಾಗಿ ರಷ್ಯಾ ಮಿಲಿಟರಿ ಸೋಮವಾರ ಹೇಳಿದೆ.

ಈ ತಿಂಗಳಲ್ಲಿ ಎರಡನೇ ಬಾರಿಗೆ ವಾಯುನೆಲೆಯನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಮಿಲಿಟರಿ ಹೇಳಿದ್ದು, ರಷ್ಯಾದ ಭದ್ರತಾ ಲೋಪದ ಮೇಲೆ ಬೆಳಕು ಚೆಲ್ಲಿದೆ.

ಡ್ರೋನ್‌ ಅವಶೇಷಕ್ಕೆ ಸಿಲುಕಿ ಮೂವರು ಯೋಧರು ಮೃತಪಟ್ಟಿದ್ಧಾರೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ತಿಳಿಸಿದೆ.

ADVERTISEMENT

ಸ್ಫೋಟದ ರಭಸಕ್ಕೆ ಭಾರೀ ಪ್ರಮಾಣದ ಬೆಂಕಿ ಆವರಿಸಿದ್ದು, ನಾಲ್ಕು ಮಂದಿ ಗಾಯಗೊಂಡಿದ್ದಾರೆ ಎಂದು ರಷ್ಯಾದ ಬಝಾ ನ್ಯೂಸ್ ವರದಿ ಮಾಡಿದೆ. ತನ್ನ ಟೆಲಿಗ್ರಾಮ್ ಚಾನಲ್‌ನಲ್ಲಿ ವಿಡಿಯೊವನ್ನು ಪೋಸ್ಟ್ ಮಾಡಿದೆ.

ಆದರೆ, ಈ ಡ್ರೋನ್ ಅನ್ನು ಉಕ್ರೇನ್ ಅಥವಾ ರಷ್ಯಾ ನೆಲದಿಂದ ಹಾರಿಸಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಅದು ಹೇಳಿದೆ.

ಒಂದೊಮ್ಮೆ ಉಕ್ರೇನ್‌ನಿಂದಾಗಿ ಡ್ರೋನ್ ಉಡಾವಣೆಯಾಗಿದ್ದರೆ ರಷ್ಯಾದ ಸರಟೊವ್ ಪ್ರದೇಶದ ವೊಲ್ಗಾ ನದಿ ತಟದಲ್ಲಿರುವ ಎಂಗೆಲ್ಸ್ ವಾಯುನೆಲೆಗೆ ತಲು‍ಪಲು 600 ಕಿ.ಮೀ ಪ್ರಯಾಣಿಸಿರಬೇಕು. ಅಷ್ಟು ದೂರ ಪ್ರಯಾಣಿಸಿದ ಬಳಿಕ ಡ್ರೋನ್ ಅನ್ನು ಹೊಡೆದುರುಳಿಸಲಾಗಿದ್ದರೆ ಅದು ಖಂಡಿತಾ ರಷ್ಯಾ ವಾಯು ಸುರಕ್ಷತೆ ಸಾಮರ್ಥ್ಯದ ಮೇಲೆ ಪ್ರಶ್ನೆಗಳನ್ನು ಎತ್ತುತ್ತದೆ. ರಷ್ಯಾ ನೆಲದಲ್ಲಿ ಡ್ರೋನ್ ಇಷ್ಟು ದೂರ ಸಂಚರಿಸುವವರೆಗೂ ರಷ್ಯಾದ ವಾಯು ರಕ್ಷಣಾ ವ್ಯವಸ್ಥೆಗೆ ಅದರ ಜಾಡು ಹಿಡಿಯಲು ಆಗಿಲ್ಲವೇ? ಎಂಬ ಪ್ರಶ್ನೆ ಎದ್ದಿದೆ.

ಈ ದಾಳಿಯನ್ನು ಉಕ್ರೇನ್ ನಡೆಸಿದೆ ಎಂಬುದನ್ನು ನೇರವಾಗಿ ಒಪ್ಪಿಕೊಳ್ಳದ ಉಕ್ರೇನ್ ವಾಯುಸೇನೆಯ ವಕ್ತಾರ ಯುರಿಲ್ ಇಹ್ನಾಟ್, ‘ಇವೆಲ್ಲ ರಷ್ಯಾದ ಆಕ್ರಮಣದ ಪರಿಣಾಮಗಳು’ ಎಂದು ಹೇಳಿದ್ದಾರೆ.

ಈ ಯುದ್ಧ ಅವರ ದೇಶದೊಳಗೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ರಷ್ಯಾ ಅಂದುಕೊಂಡಿದ್ದರೆ ಅದು ಅವರ ಅತ್ಯಂತ ದೊಡ್ಡ ತಪ್ಪಾಗುತ್ತದೆ ಎಂದೂ ಸೂಚ್ಯವಾಗಿ ಹೇಳಿದ್ದಾರೆ.

ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾದ ಮೇಲೂ ಆಗಾಗ್ಗೆ ದಾಳಿಗಳು ನಡೆಯುತ್ತಲೇ ಇವೆ. ಕ್ರಿಮಿಯಾದ ಪೆನಿನ್ಸೂಲಾದ ಮೇಲೂ ದಾಳಿ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.