ADVERTISEMENT

ಉಕ್ರೇನ್‌ನೊಂದಿಗೆ ಎರಡನೇ ಸುತ್ತಿನ ಮಾತುಕತೆ ನಡೆಸಲು ಸಿದ್ಧ ಎಂದ ರಷ್ಯಾ

ಏಜೆನ್ಸೀಸ್
Published 2 ಮಾರ್ಚ್ 2022, 11:50 IST
Last Updated 2 ಮಾರ್ಚ್ 2022, 11:50 IST
ಕೀವ್ ನಗರದ ಮೇಲೆ ರಷ್ಯಾದ ಮುಂದುವರಿದ ದಾಳಿಯಿಂದಾಗಿ ಮೆಟ್ರೋ ನಿಲ್ದಾಣದ ನೆಲಮಾಳಿಗೆಯಲ್ಲಿ ಆಶ್ರಯ ಪಡೆದ ಮಹಿಳೆ (ಚಿತ್ರ-ರಾಯಿಟರ್ಸ್)
ಕೀವ್ ನಗರದ ಮೇಲೆ ರಷ್ಯಾದ ಮುಂದುವರಿದ ದಾಳಿಯಿಂದಾಗಿ ಮೆಟ್ರೋ ನಿಲ್ದಾಣದ ನೆಲಮಾಳಿಗೆಯಲ್ಲಿ ಆಶ್ರಯ ಪಡೆದ ಮಹಿಳೆ (ಚಿತ್ರ-ರಾಯಿಟರ್ಸ್)   

ಮಾಸ್ಕೊ: ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧಕ್ಕೆ ವಿರಾಮ ನೀಡುವ ನಿಟ್ಟಿನಲ್ಲಿ ಉಕ್ರೇನ್ ಅಧಿಕಾರಿಗಳೊಂದಿಗೆ ಬುಧವಾರ ಸಂಜೆ ಎರಡನೇ ಸುತ್ತಿನ ಮಾತುಕತೆ ನಡೆಸಲು ರಷ್ಯಾದ ನಿಯೋಗ ಸಿದ್ಧವಿದೆ ಎಂದು ಕ್ರೆಮ್ಲಿನ್ ವಕ್ತಾರರು ತಿಳಿಸಿದ್ದಾರೆ.

ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಮಿಲಿಟರಿ ಕಾರ್ಯಾಚರಣೆ ಕೈಗೊಳ್ಳುವಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆದೇಶ ನೀಡಿ ಇಂದಿಗೆ ಏಳು ದಿನಗಳು ಕಳೆದಿವೆ. ಈ ಬೆನ್ನಲ್ಲೇ ಯುದ್ಧಕ್ಕೆ ವಿರಾಮ ನೀಡುವ ನಿಟ್ಟಿನಲ್ಲಿ ನಡೆದ ಮೊದಲನೇ ಸುತ್ತಿನ ಮಾತುಕತೆ ಫಲಪ್ರದವಾಗಿರಲಿಲ್ಲ. ಹೀಗಾಗಿ ಶೀಘ್ರವೇ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ನಿರ್ಧರಿಸಲಾಗಿತ್ತು.

ವಕ್ತಾರ ಮಿತ್ರಿ ಪೆಸ್ಕೊವ್ ಅವರು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, 'ಬುಧವಾರ ಸಂಜೆ ವೇಳೆಗೆ ಉಕ್ರೇನ್ ಅಧಿಕಾರಿಗಳ ಬರುವಿಕೆಯನ್ನು ನಮ್ಮ ನಿಯೋಗ ಸ್ಥಳದಲ್ಲಿದ್ದು ಕಾಯುತ್ತದೆ' ಎಂದಿದ್ದಾರೆ. ಆದರೆ ಮಾತುಕತೆ ನಡೆಯುವ ಸ್ಥಳವನ್ನು ಅವರು ಬಹಿರಂಗಪಡಿಸಿಲ್ಲ.

ADVERTISEMENT

ಈ ಮಾತುಕತೆ ಕುರಿತಾಗಿ ತಮ್ಮ ಯೋಜನೆಗಳ ಬಗ್ಗೆ ಉಕ್ರೇನ್ ಅಧಿಕಾರಿಗಳಿಂದ ತಕ್ಷಣದ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ರಷ್ಯಾ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಬೆಲರೂಸ್-ಉಕ್ರೇನ್ ಗಡಿಯಲ್ಲಿ ಕಳೆದ ಭಾನುವಾರ ಮೊದಲನೇ ಸುತ್ತಿನ ಮಾತುಕತೆ ನಡೆದಿತ್ತು. ಪರಿಹಾರ ಸಿಗದ ಕಾರಣ ಉಭಯ ದೇಶಗಳು ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ತೀರ್ಮಾನಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.