ADVERTISEMENT

ಪರಮಾಣು ಶಸ್ತ್ರಗಳ ನಿಯೋಜನೆ– ಅಮೆರಿಕ ಬುದ್ದಿ ಹೇಳುವ ಅಗತ್ಯವಿಲ್ಲ: ರಷ್ಯಾ

ರಾಯಿಟರ್ಸ್‌
Published 27 ಮೇ 2023, 20:21 IST
Last Updated 27 ಮೇ 2023, 20:21 IST
.....
.....   

ಮಾಸ್ಕೊ: ಪ್ರಬಲ ಪರಮಾಣು ಶಸ್ತ್ರಾಸ್ತ್ರಗಳನ್ನು ಬೆಲಾರಸ್‌ ಗಡಿಯಲ್ಲಿ ನಿಯೋಜಿಸಲು ರಷ್ಯಾ ಸಜ್ಜಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ನೀಡಿರುವ ಹೇಳಿಕೆಯನ್ನು ರಷ್ಯಾ ತಳ್ಳಿಹಾಕಿದೆ. ಜೊತೆಗೆ, ಪರಮಾಣು ಶಸ್ತ್ರಗಳ ನಿಯೋಜನೆ ಕುರಿತು ರಷ್ಯಾಕ್ಕೆ ಅಮೆರಿಕ ತಿಳಿ ಹೇಳಬೇಕಾಗಿಲ್ಲ ಎಂದು ಕೂಡಾ ಹೇಳಿದೆ.

ಬೆಲಾರಸ್‌ನಲ್ಲಿ ರಷ್ಯಾ ಪ್ರಬಲ ಪರಮಾಣು ಶಸ್ತ್ರಾಸ್ತ್ರ ನಿಯೋಜಿಸಲಿರುವ ಕುರಿತ ವರದಿಗಳನ್ನು ನೋಡಿ ಆತಂಕವಾಗಿದೆ ಎಂದು ಬೈಡನ್‌ ಅವರು ಶುಕ್ರವಾರ ಹೇಳಿದ್ದರು.

ಈ ಹೇಳಿಕೆಗೆ ಅಮೆರಿಕದಲ್ಲಿಯ ರಷ್ಯಾ ರಾಯಭಾರ ಕಚೇರಿಯು ತಿರುಗೇಟು ನೀಡಿದೆ. ‘ನಮ್ಮ ಮೇಲೆ ಅಮೆರಿಕ ಅತ್ಯಾಧುನಿಕ ಶಸ್ತ್ರಗಳನ್ನು ಬಳಸಿ ಯುದ್ಧ ಮಾಡಬಹುದು. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಭದ್ರತೆ ಒದಗಿಸುವುದು ರಷ್ಯಾ ಮತ್ತು ಬೆಲಾರಸ್‌ ದೇಶಗಳ ಹಕ್ಕು’ ಎಂದು ಹೇಳಿದೆ. ‘ಈ ಕ್ರಮವನ್ನು ನಾವು ಅಂತರರಾಷ್ಟ್ರೀಯ ಕಾನೂನಿನ ಹೊಣೆಗಾರಿಕೆಗೆ ಬದ್ಧವಾಗಿಯೇ ತೆಗೆದುಕೊಂಡಿದ್ದೇವೆ’ ಎಂದು ಕೂಡಾ ಹೇಳಿದೆ. 

ADVERTISEMENT

ದಶಕಗಳಿಂದ ಅಮೆರಿಕವು ಯುರೋ‍ಪ್‌ನಲ್ಲಿ ಭಾರಿ ಪ್ರಮಾಣದ ಪರಮಾಣು ಶಸ್ತ್ರಗಾರವನ್ನು ಹೊಂದಿದೆ. ತನ್ನ ನ್ಯಾಟೊ ಮೈತ್ರಿಕೂಟದ ಜೊತೆ ಸೇರಿ ಪರಮಾಣು ಶಸ್ತ್ರಗಳ ಹಂಚಿಕೆ ವ್ಯವಸ್ಥೆ ಮಾಡಿಕೊಂಡಿದೆ. ಬೇರೆ ದೇಶಗಳನ್ನು ದೂಷಿಸುವ ಮೊದಲು ಅಮೆರಿಕ ತನ್ನನ್ನು ತಾನು ವಿಮರ್ಶೆಗೆ ಒಳಪಡಿಸಿಕೊಳ್ಳಬೇಕು ಎಂದು ರಷ್ಯಾ ಹೇಳಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.