ADVERTISEMENT

ಉಕ್ರೇನ್‌ನಲ್ಲಿ ಸಂಪೂರ್ಣ ಮಿಲಿಟರಿ ಕಾರ್ಯಾಚರಣೆ ಕಡಿಮೆ ಮಾಡಲು ರಷ್ಯಾ ತೀರ್ಮಾನ

ಏಜೆನ್ಸೀಸ್
Published 29 ಮಾರ್ಚ್ 2022, 13:12 IST
Last Updated 29 ಮಾರ್ಚ್ 2022, 13:12 IST
ಉಕ್ರೇನ್‌ನಲ್ಲಿ ರಷ್ಯಾ ಪಡೆಗಳಿಂದ ಶೆಲ್ ದಾಳಿ
ಉಕ್ರೇನ್‌ನಲ್ಲಿ ರಷ್ಯಾ ಪಡೆಗಳಿಂದ ಶೆಲ್ ದಾಳಿ   

ಇಸ್ತಾಂಬುಲ್: ಇಲ್ಲಿ ನಡೆದ 'ಅರ್ಥಪೂರ್ಣ' ಮಾತುಕತೆಗಳ ನಂತರ ರಾಜಧಾನಿ ಕೀವ್ ನಗರ ಸೇರಿದಂತೆ ಉತ್ತರ ಉಕ್ರೇನ್‌ನಲ್ಲಿ ರಷ್ಯಾ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು 'ಸಂಪೂರ್ಣವಾಗಿ' ಕಡಿಮೆ ಮಾಡುತ್ತದೆ ಎಂದು ಮಾಸ್ಕೋದ ಸಂಧಾನಕಾರರು ಮಂಗಳವಾರ ಹೇಳಿದ್ದಾರೆ.

'ಉಕ್ರೇನ್‌ನ ತಟಸ್ಥತೆ ಮತ್ತು ಪರಮಾಣು ಹೊಂದದ ಸ್ಥಿತಿಯ ಕುರಿತು ಒಪ್ಪಂದ ಮಾಡಿಕೊಳ್ಳುವ ಮಾತುಕತೆಗಳು ಪ್ರಾಯೋಗಿಕ ಕ್ಷೇತ್ರಕ್ಕೆ ಸ್ಥಳಾಂತರಗೊಂಡಿವೆ. ಕೀವ್ ಮತ್ತು ಚೆರ್ನಿಗಿವ್‌ ಪ್ರದೇಶಗಳಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಹಲವಾರು ಬಾರಿ ಆಮೂಲಾಗ್ರವಾಗಿ ಕಡಿಮೆ ಮಾಡಲು ನಿರ್ಧರಿಸಲಾಗಿದೆ' ಎಂದು ರಷ್ಯಾದ ಉಪ ರಕ್ಷಣಾ ಸಚಿವ ಅಲೆಕ್ಸಾಂಡರ್ ಫೋಮಿನ್ ತಿಳಿಸಿದ್ದಾರೆ.

ಮುಖ್ಯ ಸಂಧಾನಕಾರ ವ್ಲಾಡಿಮಿರ್ ಮೆಡಿನ್‌ಸ್ಕಿ ಅವರು, ಮಾತುಕತೆಯಲ್ಲಿ 'ಅರ್ಥಪೂರ್ಣ ಚರ್ಚೆ' ನಡೆದಿದೆ ಮತ್ತು ಉಕ್ರೇನ್ ಪ್ರಸ್ತಾಪಗಳನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮುಂದಿಡಲಾಗುವುದು ಎಂದು ಹೇಳಿದರು.

ADVERTISEMENT

ಫೆ.24 ರಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಸೇನಾ ಕಾರ್ಯಾಚರಣೆಯನ್ನು ಘೋಷಿಸಿದ್ದಾರೆ. ಅಂದಿನಿಂದ ರಷ್ಯಾ ಪಡೆಗಳು ಉಕ್ರೇನ್ ಮೇಲೆ ಆಕ್ರಮಣವನ್ನು ಮುಂದುವರಿಸಿದ್ದು, ಯೋಧರು, ನಾಗರಿಕರು ಸೇರಿದಂತೆ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.