ADVERTISEMENT

ರಷ್ಯಾ–ಉಕ್ರೇನ್‌ ಸಂಘರ್ಷ: 1,000 ಜನರಿದ್ದ ಕಟ್ಟಡ ಧ್ವಂಸ

ಮಹಿಳೆಯರು, ಮಕ್ಕಳು ಆಶ್ರಯ ಪಡೆದಿದ್ದ ರಂಗಮಂದಿರದ ಮೇಲೆ ರಷ್ಯಾ ದಾಳಿ: ಉಕ್ರೇನ್‌

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2022, 22:13 IST
Last Updated 17 ಮಾರ್ಚ್ 2022, 22:13 IST
ಉಕ್ರೇನ್‌ನ ಮರಿಯುಪೋಲ್‌ನಲ್ಲಿ ರಷ್ಯಾ ಪಡೆಗಳು ನಡೆಸಿದ ಶೆಲ್‌ ದಾಳಿಗೆ ಹಾನಿಗೊಂಡ ರಂಗಮಂದಿರ –ಎಎಫ್‌ಪಿ ಚಿತ್ರ
ಉಕ್ರೇನ್‌ನ ಮರಿಯುಪೋಲ್‌ನಲ್ಲಿ ರಷ್ಯಾ ಪಡೆಗಳು ನಡೆಸಿದ ಶೆಲ್‌ ದಾಳಿಗೆ ಹಾನಿಗೊಂಡ ರಂಗಮಂದಿರ –ಎಎಫ್‌ಪಿ ಚಿತ್ರ   

ಕೀವ್‌: ಯುದ್ಧದಿಂದತಲ್ಲಣಗೊಂಡಿರುವ ಉಕ್ರೇನ್‌ನ ನಗರ ಮರಿಯುಪೋಲ್‌ನ ರಂಗಮಂದಿರವೊಂದರ ಮೇಲೆ ರಷ್ಯಾಬುಧವಾರ ರಾತ್ರಿ ಬಾಂಬ್‌ ದಾಳಿ ನಡೆಸಿದೆ ಎಂದು ಉಕ್ರೇನ್‌ ಹೇಳಿದೆ. ಮೂರು ಮಹಡಿಯ ಈ ರಂಗಮಂದಿರದಲ್ಲಿ ಮಕ್ಕಳು ಮತ್ತು ಮಹಿಳೆಯರು ಸೇರಿ ಭಾರಿ ಸಂಖ್ಯೆಯಲ್ಲಿ ಜನರು ಆಶ್ರಯ ಪಡೆದಿದ್ದರು ಎಂದು ವರದಿಯಾಗಿದೆ. ಕಟ್ಟಡದ ಮಧ್ಯಭಾಗವು ಸ‍ಂ‍ಪೂರ್ಣವಾಗಿ ನಾಶವಾಗಿದೆ. ಬಾಂಬ್‌ ದಾಳಿಯಲ್ಲಿ ಬದುಕುಳಿದವರ ರಕ್ಷಣಾ ಕಾರ್ಯಾಚರಣೆ ಗುರುವಾರ ಆರಂಭವಾಗಿದೆ.

ಕಟ್ಟಡದಲ್ಲಿ 1,000ದಿಂದ 1,200 ಜನರು ಆಶ್ರಯ ಪಡೆದಿದ್ದರು ಎಂದು ಮರಿಯುಪೋಲ್‌ನ ಉಪ ಮೇಯರ್‌ ಹೇಳಿದ್ದಾಗಿ ‘ಬಿಬಿಸಿ’ ವರದಿ ಮಾಡಿದೆ. ಸಾವು ನೋವಿನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.

ಈ ಪ್ರದೇಶದ ಮೇಲೆ ರಷ್ಯಾ ಪಡೆಗಳು ನಿರಂತರವಾಗಿ ಶೆಲ್‌ ದಾಳಿ ನಡೆಸುತ್ತಿವೆ. ಹಾಗಾಗಿ ರಕ್ಷಣಾ ಕಾರ್ಯಾಚರಣೆ ಮತ್ತು ಸಾವು ನೋವಿನ ಮಾಹಿತಿ ಪಡೆದುಕೊಳ್ಳುವುದು ಸಾಧ್ಯವಾಗಿಲ್ಲ ಎಂದು ಮೇಯರ್‌ ಅವರ ಸಲಹೆಗಾರರೊಬ್ಬರು ಹೇಳಿದ್ದಾರೆ.

ADVERTISEMENT

ರಷ್ಯಾ ಪಡೆಗಳಿಗೆ ಉಕ್ರೇನ್‌ನಲ್ಲಿ ಭಾರಿ ಪ್ರತಿರೋಧ ಮುಂದುವರಿದಿದೆ ಮತ್ತು ಭಾರಿ ನಷ್ಟವೂ ಉಂಟಾಗಿದೆ. ಹೀಗಾಗಿ, ಉಕ್ರೇನ್‌ನ ನಗರಗಳ ಮೇಲೆ ಬಾಂಬ್‌ ಮತ್ತು ಕ್ಷಿಪಣಿ ದಾಳಿಯನ್ನು ರಷ್ಯಾ ಹೆಚ್ಚಿಸಿದೆ. ಯುದ್ಧವು ನಾಲ್ಕನೇ ವಾರಕ್ಕೆ ಕಾಲಿರಿಸಿದ್ದು, ಜನವಸತಿ ಪ್ರದೇಶಗಳನ್ನೂ ಬಿಡದೆ ರಷ್ಯಾ ದಾಳಿ ನಡೆಸುತ್ತಿದೆ. ಆಹಾರ ಸಂಗ್ರಹಿಸಲು ಸರದಿಯಲ್ಲಿ ನಿಂತಿದ್ದವರ ಮೇಲೆಯೂ ದಾಳಿ ನಡೆಸಲಾಗಿದೆ.

‘ರಷ್ಯಾ ಪಡೆಯು ದೊಡ್ಡ ಬಾಂಬನ್ನು ಉದ್ದೇಶಪೂರ್ವಕವಾಗಿ ರಂಗಮಂದಿರದ ಮೇಲೆ ಹಾಕಿದೆ. ನಮ್ಮ ಜನರ ಮೇಲೆ ರಷ್ಯಾ ಮಾಡುತ್ತಿರುವ ಅನಾಚಾರ ನೋಡಿ ಹೃದಯ ಒಡೆದು ಹೋಗಿದೆ’ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡೊಮಿರ್‌ ಝೆಲೆನ್‌ಸ್ಕಿ ಹೇಳಿದ್ದಾರೆ.

ಉಕ್ರೇನ್‌ ಮತ್ತು ರಷ್ಯಾ ನಡುವೆ ಸಂಧಾನ ಮಾತುಕತೆ ಗುರುವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಆದರೆ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಪ್ರತಿಕೂಲ ಹೇಳಿಕೆಗಳನ್ನು ನಿರಂತರವಾಗಿ ನೀಡುತ್ತಿದ್ದಾರೆ. ಹಾಗಾಗಿ, ಮಾತುಕತೆಯಲ್ಲಿ ಯಾವುದೇ ಭರವಸೆ ಮೂಡಿಲ್ಲ. ಪಶ್ಚಿಮ ದೇಶಗಳ ಪರವಾಗಿರುವ ರಷ್ಯನ್ನರನ್ನು ‘ಕೊಳಚೆ ಮತ್ತು ದೇಶದ್ರೋಹಿಗಳು’ ಎಂದು ಪುಟಿನ್‌ ಹೇಳಿದ್ದಾರೆ. ಅವರಿಗೆ ತಕ್ಕ ಶಾಸ್ತಿಯಾಗಬೇಕು ಎಂದಿದ್ದಾರೆ.

ರಂಗಮಂದಿರದ ಮೇಲೆ ದಾಳಿ ನಡೆಸಲಾಗಿದೆ ಎಂಬ ಆರೋಪವನ್ನು ರಷ್ಯಾ ಅಲ್ಲಗಳೆದಿದೆ.

* ಕೀವ್‌ನ ಹೊರವಲಯದಲ್ಲಿ ಯುದ್ಧ ತೀವ್ರಗೊಂಡಿದೆ. ರಷ್ಯಾದ ಹತ್ತಕ್ಕೂ ಹೆಚ್ಚು ವಿಮಾನಗಳು ಮತ್ತು ಕ್ಷಿಪಣಿಗಳನ್ನು ಹೊಡೆದು ಉರುಳಿಸಲಾಗಿದೆ. ರಷ್ಯಾದ ಯುದ್ಧನೌಕೆಯೊಂದನ್ನು ಕಪ್ಪು ಸಮುದ್ರದಲ್ಲಿ ಮುಳುಗಿಸಲಾಗಿದೆ ಎಂದು ಉಕ್ರೇನ್‌ ಹೇಳಿಕೊಂಡಿದೆ.

* ಭೂಪ್ರದೇಶ, ಸಮುದ್ರ ಮತ್ತು ವಾಯುಪ್ರದೇಶದಲ್ಲಿ ರಷ್ಯಾಕ್ಕೆ ಹೆಚ್ಚಿನ ಯಶಸ್ಸು ಲಭಿಸಿಲ್ಲ ಎಂದು ಬ್ರಿಟನ್‌ನ ಗುಪ‍್ತಚರ ವರದಿಗಳು ಹೇಳಿವೆ

* ರಷ್ಯಾದ ಸುಮಾರು 7,000 ಸೈನಿಕರು ಉಕ್ರೇನ್‌ ಯುದ್ಧದಲ್ಲಿ ಹತ್ಯೆಯಾಗಿದ್ದಾರೆ ಎಂದು ಅಮೆರಿಕ ಹೇಳಿದೆ

* ಉಕ್ರೇನ್‌ನ ಹಾರ್ಕಿವ್‌ ನಗರದ ಒಂದು ಶಾಲೆ ಮತ್ತು ಸಾಂಸ್ಕೃತಿಕ ಕೇಂದ್ರದ ಮೇಲೆ ರಷ್ಯಾ ನಡೆಸಿದ ದಾಳಿಯಲ್ಲಿ 21 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ

* ರಷ್ಯಾ ಪಡೆಗಳು ನಡೆಸುತ್ತಿರುವ ಬೇಕಾಬಿಟ್ಟಿ ದಾಳಿಯಿಂದಾಗಿ ಈವರೆಗೆ ಮರಿಯುಪೋಲ್‌ನಲ್ಲಿ 2,000ಕ್ಕೂ ಹೆಚ್ಚು ನಾಗರಿಕರು ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.