ADVERTISEMENT

ರಷ್ಯಾ–ಉಕ್ರೇನ್ ಸಂಘರ್ಷ: ಲುವಿವ್‌, ಕೀವ್‌ ಮೇಲೆ ಬಾಂಬ್‌, ಕ್ಷಿ‍ಪಣಿ ಸುರಿಮಳೆ 

ಸಮರನೌಕೆ ನಾಶದ ಪ್ರತೀಕಾರಕ್ಕಾಗಿ ಉಕ್ರೇನ್‌ನ ಮತ್ತೆರಡು ಸೇನಾ ಕಾರ್ಖಾನೆ ಧ್ವಂಸಗೊಳಿಸಿದ ರಷ್ಯಾ

ರಾಯಿಟರ್ಸ್
Published 17 ಏಪ್ರಿಲ್ 2022, 5:07 IST
Last Updated 17 ಏಪ್ರಿಲ್ 2022, 5:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೀವ್‌: ರಷ್ಯಾ ತನ್ನ ಕಪ್ಪು ಸಮುದ್ರದ ನೌಕಾಬಲದ ಪ್ರತಿಷ್ಠಿತ ಸಮರನೌಕೆ ‘ಮಾಸ್ಕವಾ’ ಕಳೆದುಕೊಂಡ ನಂತರ, ರಷ್ಯಾದ ವಾಯುಪಡೆ ಮತ್ತು ಭೂಸೇನಾ ಪಡೆಗಳು ಪ್ರತೀಕಾರವಾಗಿ ಉಕ್ರೇನ್‌ ಸೇನಾ ನೆಲೆಗಳನ್ನು ಗುರಿಯಾಗಿಸಿ ಶನಿವಾರ ದಾಳಿ ತೀವ್ರಗೊಳಿಸಿವೆ.

ಶನಿವಾರ ನಸುಕಿನಲ್ಲಿ ಉಕ್ರೇನ್‌ನ ಲುವಿವ್‌ ಮತ್ತು ಕೀವ್‌ ನಗರಗಳ ಮೇಲೆ ರಷ್ಯಾ ಯುದ್ಧ ವಿಮಾನಗಳು ಬಾಂಬ್‌ ಮತ್ತು ಕ್ಷಿಪಣಿಗಳ ಸುರಿಮಳೆಗರೆದಿವೆ.

ಕೀವ್‌ ಬಳಿ ಇರುವ ಯುದ್ಧ ಟ್ಯಾಂಕ್‌ ದುರಸ್ತಿ ಘಟಕ, ಶಸಸ್ತ್ರ ವಾಹನ ತಯಾರಿಕೆ ಮತ್ತು ಸೇನಾ ಸಲಕರಣೆಗಳ ಕಾರ್ಖಾನೆಯನ್ನೂ ದೂರಗಾಮಿ ಶ್ರೇಣಿಯ ಕ್ಷಿಪಣಿಗಳಿಂದ ದ್ವಂಸಗೊಳಿಸಲಾಗಿದೆ. ಮೈಕೊಲೈವ್‌ನಲ್ಲಿರುವ ಸೇನಾ ವಾಹನಗಳ ದುರಸ್ತಿ ಕಾರ್ಖಾನೆಯನ್ನೂ ನಾಶಪಡಿಸಲಾಗಿದೆ ಎಂದು ರಷ್ಯಾ ಹೇಳಿದೆ.

ADVERTISEMENT

ಹಾರ್ಕಿವ್‌, ಡೊನೆಟ್‌ಸ್ಕ್‌, ಲುಹಾನ್‌ಸ್ಕ್‌ ಪ್ರದೇಶಗಳಲ್ಲಿ ಬಹುಮಹಡಿ ಕಟ್ಟಡಗಳು ಮತ್ತು ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ರಷ್ಯಾ ಪಡೆಗಳು ಶೆಲ್‌ ದಾಳಿ ಮುಂದುವರಿಸಿವೆ.

ಕೀವ್‌ನ ಆಗ್ನೇಯದ ಡಾರ್ನಿಟ್‌ಸ್ಕಿ ಜಿಲ್ಲೆಯಲ್ಲಿ ಕ್ಷಿಪಣಿ ದಾಳಿಯಾಗಿದ್ದು, ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದೆ. ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ರಾಜಧಾನಿಯ ಪಶ್ಚಿಮದಲ್ಲಿ ದಾಳಿ ತೀವ್ರಗೊಳಿಸಲು ರಷ್ಯಾ ಪಡೆಗಳು ಮರುಒಗ್ಗೂಡಿವೆ ಎಂದು ಕೀವ್‌ಮೇಯರ್ ವಿಟಾಲಿ ಕ್ಲಿಟ್‌ಸ್ಕೊ ತಿಳಿಸಿದರು.

ಬೆಲರೂಸ್‌ ನೆಲದಿಂದ ಕಾರ್ಯಾಚರಿಸಿರುವರಷ್ಯಾದ ಯುದ್ಧವಿಮಾನಗಳು, ಪೋಲೆಂಡ್‌ ಗಡಿ ಸಮೀಪದ ಲುವಿವ್‌ ನಗರದ ಮೇಲೆ ಕ್ಷಿಪಣಿ ದಾಳಿ ಮಾಡಿವೆ. ವಾಯು ರಕ್ಷಣಾ ವ್ಯವಸ್ಥೆಯಿಂದ ನಾಲ್ಕು ಕ್ರೂಸ್ ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್‌ ಹೇಳಿದೆ.

ಉಕ್ರೇನಿನ ನೆಪ್ಚೂನ್‌ ಕ್ಷಿಪಣಿಗಳ ದಾಳಿಯಿಂದ ‘ಮಾಸ್ಕವಾ’ ನೌಕೆ ಮುಳುಗಿದ ನಂತರ ರೊಚ್ಚಿಗೆದ್ದಿರುವ ರಷ್ಯಾ, ಉಕ್ರೇನಿನ ವಿಧ್ವಂಸಕ ಮತ್ತುಭಯೋತ್ಪಾದನಾ ಕೃತ್ಯಗಳನ್ನು ಹತ್ತಿಕ್ಕಲು ನಗರಗಳ ಮೇಲೆ ದೂರಗಾಮಿ ಕ್ಷಿಪಣಿಗಳ ದಾಳಿ ತೀವ್ರಗೊಳಿಸುವುದಾಗಿ ಶುಕ್ರವಾರ ಎಚ್ಚರಿಕೆ ನೀಡಿತ್ತು.

‘ಮರಿಯುಪೊಲ್‌ನಲ್ಲಿ ಕಷ್ಟದ ಪರಿಸ್ಥಿತಿ ಇದೆ. ಸದ್ಯ ಬೀದಿ ಕಾಳಗ ಮುಂದುವರಿದಿದೆ. ನಗರದ ಮೇಲೆ ದಾಳಿ ತೀವ್ರಗೊಳಿಸಲು ರಷ್ಯಾ ಸೇನಾ ಬಲ ಹೆಚ್ಚಿಸಿಕೊಳ್ಳುತ್ತಿದೆ’ ಎಂದು ಉಕ್ರೇನ್‌ ರಕ್ಷಣಾ ಸಚಿವಾಲಯದ ವಕ್ತಾರ ಒಲೆಕ್ಸಾಂಡರ್ ಮೊಟುಜಿಯಾನಿಕ್ ತಿಳಿಸಿದರು.

ಡಾನ್‌ಬಾಸ್‌ ಪ್ರಾಂತ್ಯದ ಲುಹಾನ್‌ಸ್ಕ್‌ನಲ್ಲಿ ರಷ್ಯಾದ ಶೆಲ್‌ ದಾಳಿಗೆ ಒಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಲಿಸಿಚಾನ್‌ಸ್ಕ್‌ ಮತ್ತು ಸೆವೆರೊಡೊನೆಟ್‌ಸ್ಕ್‌ನಲ್ಲಿ ರಷ್ಯಾ ಪಡೆಗಳ ದಾಳಿಗೆ ಅನಿಲ ಪೈಪ್‌ ಹಾನಿಗೀಡಾಗಿದೆ ಎಂದು ಗವರ್ನರ್‌ ಸೆರಿಹಿ ಐದೈ ತಿಳಿಸಿದ್ದಾರೆ.

ಉಕ್ರೇನಿನ 3 ಸಾವಿರ ಸೈನಿಕರ ಸಾವು:

ಏಳು ವಾರಗಳ ಯುದ್ಧದಲ್ಲಿ ಸುಮಾರು 2,500ರಿಂದ 3,000 ಉಕ್ರೇನ್‌ ಸೈನಿಕರು ಹುತಾತ್ಮರಾಗಿದ್ದಾರೆ. ಸುಮಾರು 10 ಸಾವಿರ ಯೋಧರು ಗಾಯಗೊಂಡಿದ್ದಾರೆ. ಹಾಗೆಯೇ ನಮ್ಮ ಸೇನೆ, ರಷ್ಯಾದ ಸುಮಾರು 20 ಸಾವಿರ ಆಕ್ರಮಣಕಾರರನ್ನು ಕೊಂದಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ.

ಭಯೋತ್ಪಾದನೆ ಪ್ರಾಯೋಜಿತ ರಾಷ್ಟ್ರಗಳಾದಉತ್ತರ ಕೊರಿಯಾ, ಕ್ಯೂಬಾ, ಇರಾನ್ ಮತ್ತು ಸಿರಿಯಾ ಪಟ್ಟಿಗೆ ರಷ್ಯಾವನ್ನೂ ಸೇರಿಸಬೇಕೆಂದು ಝೆಲೆನ್‌ಸ್ಕಿ ಅಮೆರಿಕಕ್ಕೆ ಮನವಿ ಮಾಡಿರುವುದಾಗಿ ‘ವಾಷಿಂಗ್ಟನ್ ಪೋಸ್ಟ್’ ವರದಿ ಮಾಡಿದೆ.

‘ಪುಟಿನ್ ಮೇಲೆ ಒತ್ತಡ ಹೆಚ್ಚಿಸಲು ನಾವು ಎಲ್ಲ ಆಯ್ಕೆಗಳನ್ನು ಪರಿಗಣಿಸುವುದನ್ನು ಮುಂದುವರಿಸುತ್ತೇವೆ’ ಎಂದು ಶ್ವೇತಭವನದ ವಕ್ತಾರರು ಪ್ರತಿಕ್ರಿಯಿಸಿರುವುದಾಗಿ ಅದು ಹೇಳಿದೆ.

52ನೇ ದಿನದ ಬೆಳವಣಿಗೆಗಳು

*ದಕ್ಷಿಣ ಸ್ಪೇನ್‌ನ ಫ್ಯುಯೆಂಟಸ್‌ ಡಿ ಆ್ಯಂಡಲೂಸಿಯಾ ನಗರವು ತನ್ನ ಹೆಸರನ್ನು ‘ಉಕ್ರೇನ್‌’ ಎಂದು ಮರುನಾಮಕರಣ ಮಾಡಿಕೊಂಡಿದೆ. ನಗರದ ರಸ್ತೆಗಳಿಗೆ ಕೀವ್‌, ಒಡೆಸಾ, ಮರಿಯುಪೊಲ್‌ ಹೆಸರಿಟ್ಟಿದೆ

*ರಷ್ಯಾದ ಮೇಲೆ ಹೇರಿರುವ ನಿರ್ಬಂಧಗಳು ಸಾಕಾಗುತ್ತಿಲ್ಲ. ವಿಶ್ವದ ಪ್ರಜಾಪ್ರಭುತ್ವ ರಾಷ್ಟ್ರಗಳೆಲ್ಲವೂ ರಷ್ಯಾದಿಂದ ತೈಲ ಖರೀದಿ ಸ್ಥಗಿತಗೊಳಿಸಬೇಕು– ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ಆಗ್ರಹ

*ರಷ್ಯಾದ ಆಕ್ರಮಣದ ವಿರುದ್ಧ ನ್ಯಾಟೊ ಸದಸ್ಯ ರಾಷ್ಟ್ರ ಟರ್ಕಿಯಿಂದಎಲ್ಲ ರೀತಿಯ ಬೆಂಬಲ ಪಡೆಯಲು ಪ್ರಯತ್ನ ನಡೆಸುತ್ತಿದ್ದೇವೆ– ಉಕ್ರೇನ್‌ ರಾಜತಾಂತ್ರಿಕರ ಹೇಳಿಕೆ

*ಮರಿಯುಪೊಲ್‌ ನಗರ ರಕ್ಷಣೆ ಮಾಡುತ್ತಿರುವ ರಕ್ಷಕರ ನಾಶ, ರಷ್ಯಾದ ಜತೆಗಿನ ಶಾಂತಿ ಮಾತುಕತೆಯನ್ನು ಕೊನೆಗೊಳಿಸಲಿದೆ– ಝೆಲೆನ್‌ಸ್ಕಿ ಎಚ್ಚರಿಕೆ

*ರಷ್ಯಾ ವಿಶೇಷ ಸೇನಾ ಕಾರ್ಯಾಚರಣೆ ಆರಂಭಿಸುವುದಕ್ಕೂ ಮೊದಲೇ ಜರ್ಮನಿ ಮತ್ತು ಅಮೆರಿಕ ಜತೆಗೂಡಿ ಉಕ್ರೇನ್‌ನಲ್ಲಿ ಹಲವು ವರ್ಷಗಳಿಂದ ಸೇನಾ ಜೈವಿಕ ಅಸ್ತ್ರಗಳ ಚಟುವಟಿಕೆಗಳನ್ನು ನಡೆಸುತ್ತಿವೆ. ಅದೂ ಈಗಲೂ ಮುಂದುವರಿದಿರುವ ಸಾಧ್ಯತೆ ಇದೆ– ರಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರೆ ಮರಿಯಾ ಝಕಾರೊವಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.