ಉಕ್ರೇನ್ ಮೇಲೆ ರಷ್ಯಾ ಪಡೆಗಳು ಭೀಕರ ವೈಮಾನಿಕ ದಾಳಿ ನಡೆಸಿದ್ದರಿಂದ ಜನರು ಕೀವ್ ನಗರದ ಮೆಟ್ರೊ ನಿಲ್ದಾಣದಲ್ಲಿ ಗುರುವಾರ ಆಶ್ರಯ ಪಡೆದಿದ್ದರು
ಎಎಫ್‌ಪಿ ಚಿತ್ರ
ಕೀವ್: ರಷ್ಯಾ ಪಡೆಗಳು 574 ಡ್ರೋನ್ ಹಾಗೂ 40 ಕ್ಷಿಪಣಿಗಳನ್ನು ಬಳಸಿ ಉಕ್ರೇನ್ ಮೇಲೆ ಬುಧವಾರ ರಾತ್ರಿ ಭಾರಿ ದಾಳಿ ನಡೆಸಿದೆ. ಈ ವರ್ಷ ದೇಶದ ಮೇಲೆ ರಷ್ಯಾ ನಡೆಸಿದ ಅತಿ ದೊಡ್ಡ ವೈಮಾನಿಕ ದಾಳಿ ಇದಾಗಿದೆ ಎಂದು ಉಕ್ರೇನ್ ವಾಯುಪಡೆ ಗುರುವಾರ ಹೇಳಿದೆ.
ಉಕ್ರೇನ್‌ನ ಪಶ್ಚಿಮ ಭಾಗಗಳನ್ನು ಗುರಿಯಾಗಿಸಿ ದಾಳಿಗಳನ್ನು ನಡೆಸಲಾಗಿದೆ. ಉಕ್ರೇನ್‌ಗೆ ಪಶ್ಚಿಮದ ಮಿತ್ರ ರಾಷ್ಟ್ರಗಳು ಒದಗಿಸಿದ್ದ ಸೇನಾ ನೆರವು ಗುರಿಯಾಗಿಸಿ ದಾಳಿ ನಡೆಸಲಾಗಿದ್ದು, ಕನಿಷ್ಠ ಒಬ್ಬ ವ್ಯಕ್ತಿ ಮೃತಪಟ್ಟು ಇತರ 15 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ದಾಳಿಯನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಖಂಡಿಸಿದ್ದಾರೆ.
ಡ್ರೋನ್‌ಗಳ ಬಳಕೆ ವಿಚಾರದಲ್ಲಿ ಇದು ಈ ವರ್ಷ ನಡೆದಿರುವ ಮೂರನೇ ಅತಿದೊಡ್ಡ ವೈಮಾನಿಕ ದಾಳಿಯಾಗಿದೆ. ಕ್ಷಿಪಣಿಗಳ ಸಂಖ್ಯೆ ದೃಷ್ಟಿಯಿಂದ ಇದು 8ನೇ ದೊಡ್ಡ ದಾಳಿಯಾಗಿದೆ ಎಂದೂ ಹೇಳಿದ್ದಾರೆ.
‘ಡ್ರೋನ್ ತಯಾರಿಕಾ ಕಾರ್ಖಾನೆಗಳು, ಸಂಗ್ರಹಾಗಾರಗಳು, ಕ್ಷಿಪಣಿ ಉಡ್ಡಯನ ನೆಲೆಗಳು ಹಾಗೂ ಯೋಧರು ಸೇರುವ ಜಾಗಗಳನ್ನು ಗುರಿಯಾಗಿಸಿ ದಾಳಿ ಮಾಡಲಾಗಿದೆ’ ಎಂದು ರಷ್ಯಾ ರಕ್ಷಣಾ ಸಚಿವಾಲಯ ತಿಳಿಸಿದೆ.
ಅಮೆರಿಕದ ಎಲೆಕ್ಟ್ರಾನಿಕ್ಸ್ ಘಟಕವೊಂದರ ಮೇಲೂ ರಷ್ಯಾ ಪಡೆಗಳು ದಾಳಿ ನಡೆಸಿವೆ.
ರಷ್ಯಾ ಪಡೆಗಳು ಉಕ್ರೇನ್‌ನಲ್ಲಿರುವ ಅಮೆರಿಕದ ಉದ್ಯಮಗಳ ಮೇಲೆ ದಾಳಿ ಮಾಡಿವೆ. ಶಾಂತಿ ನೆಲಸವುದನ್ನು ರಷ್ಯಾ ಬಯಸುತ್ತಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.-ಆ್ಯಂಡಿ ಹಂಡರ್, ಉಕ್ರೇನ್‌ನಲ್ಲಿರುವ ಅಮೆರಿಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.