ADVERTISEMENT

ಬಾಹ್ಯಾಕಾಶದಲ್ಲಿ ಚಿತ್ರೀಕರಣ ಮುಗಿಸಿ ಭೂಮಿಗೆ ಮರಳಿದ ರಷ್ಯಾದ ಚಿತ್ರ ತಂಡ

ರಾಯಿಟರ್ಸ್
Published 17 ಅಕ್ಟೋಬರ್ 2021, 12:01 IST
Last Updated 17 ಅಕ್ಟೋಬರ್ 2021, 12:01 IST
ಭೂಮಿಗೆ ಬಂದಿಳಿದ ಚಿತ್ರ ತಂಡ
ಭೂಮಿಗೆ ಬಂದಿಳಿದ ಚಿತ್ರ ತಂಡ    

ಮಾಸ್ಕೊ: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್) 12 ದಿನಗಳ ಕಾಲ ಸಿನಿಮಾ ಚಿತ್ರೀಕರಣ ನಡೆಸಿರುವ ರಷ್ಯಾದ ಚಿತ್ರ ತಂಡ 12 ದಿನಗಳ ನಂತರ ಭೂಮಿಗೆ ಮರಳಿದೆ.

ಬಾಹ್ಯಾಕಾಶದಲ್ಲಿ ಚಿತ್ರೀಕರಣಗೊಂಡ ಮೊದಲ ಚಿತ್ರ ಎಂಬ ಕೀರ್ತಿಗೆ ರಷ್ಯಾದ ಈ ಚಿತ್ರ ಪಾತ್ರವಾಗಲಿದೆ.

ʼದಿ ಚಾಲೆಂಜ್ʼ ಚಿತ್ರಕ್ಕಾಗಿ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲು ನಟಿ ಯುಲಿಯಾ ಪೆರಿಸಿಲ್ಡ್‌ (37) ಮತ್ತು ನಿರ್ದೇಶಕ ಲಿಮ್‌ ಶಿಪೆಂಕೊ (38) ಅವರು ಹಿರಿಯ ಗಗನಯಾತ್ರಿ ಅಂಟೊನ್‌ ಕಪ್ಲೆರೊವ್‌ ಅವರೊಂದಿಗೆ ಕಜಕಿಸ್ತಾನದ ಬೈಕೋನೂರ್ ಕಾಸ್ಮೋಡ್ರೋಮ್‌ನಿಂದ ಈ ತಿಂಗಳ ಆರಂಭದಲ್ಲಿ ಐಎಸ್‌ಎಸ್‌ಗೆ ಪ್ರಯಾಣ ಬೆಳೆಸಿದ್ದರು.

ADVERTISEMENT

ರಷ್ಯಾದ ಐಎಸ್‌ಎಸ್ ಸಿಬ್ಬಂದಿ ಒಲೆಗ್ ನೊವಿಟ್‌ಸ್ಕಿ, ನಟಿ ಯುಲಿಯಾ ಪೆರೆಸಿಲ್ಡ್, ನಿರ್ದೇಶಕ ಲಿಮ್‌ ಶಿಪೆಂಕೊ ಅವರನ್ನು ಒಳಗೊಂಡ ‘ಸೊಯುಜ್ ಎಂಎಸ್ -18’ ಹೆಸರಿನ ಬಾಹ್ಯಾಕಾಶ ಕ್ಯಾಪ್ಸೂಲ್ (ಗಗನ ನೌಕೆ) ಕಜಕ್‌ಸ್ತಾನ ಹೊರವಲಯದಲ್ಲಿ ಬೆಳಿಗ್ಗೆ 07:35 ಕ್ಕೆ (0435 ಜಿಎಂಟಿ) ಇಳಿದಿದೆ ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ‘ರೋಸ್ಕೋಸ್ಮೋಸ್’ ಹೇಳಿದೆ.

ಭೂಸ್ಪರ್ಶ ಮಾಡುವುದಕ್ಕೂ ಮೂರು ಗಂಟೆಗಳ ಹಿಂದೆ ಅವರು ಐಎಸ್‌ಎಸ್‌ನಿಂದ ಹೊರಟಿದ್ದರು.

ವಿಶಾಲ ಹುಲ್ಲುಗಾವಲಿನ ಮೇಲೆ ಕ್ಯಾಪ್ಸೂಲ್‌ ಇಳಿಯುವುದು, ಅದರಲ್ಲಿದ್ದವರು ಖುಷಿಯಿಂದ ಹೊರಬರುವ ದೃಶ್ಯಗಳು ರಷ್ಯಾದ ಸರ್ಕಾರಿ ಸುದ್ದಿ ಮಾಧ್ಯಮ ಬಿಡುಗಡೆ ಮಾಡಿದ ವಿಡಿಯೊದಲ್ಲಿದೆ.

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಹೊರ ಬಂದಿದ್ದಕ್ಕೆ ಬೇಸರವಾಗಿದೆ ಎಂದು 2015ರಲ್ಲಿ ಬಿಡುಗಡೆಯಾದ ‘ಬ್ಯಾಟಲ್‌ ಫಾರ್‌ ಸೆವಾಸ್ಟೊಪೋಲ್‌’ ಸಿನಿಮಾದ ನಟಿ ಪೆರೆಸಿಲ್ಡ್ ಹೇಳಿಕೊಂಡಿದ್ದಾರೆ.

ಚಲನಚಿತ್ರದ ಕಥಾವಸ್ತುವನ್ನು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮೋಸ್‌ ಬಹಿರಂಗಪಡಿಸಿದೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್‌) ತೆರಳಿದ್ದ ಗಗನಯಾನಿಯೊಬ್ಬರನ್ನು ರಕ್ಷಿಸುವ ಸಲುವಾಗಿ ಶಸ್ತ್ರಚಿಕಿತ್ಸಕಿಯೊಬ್ಬರನ್ನು ಅಂತರಿಕ್ಷಕ್ಕೆ/ಬಾಹ್ಯಾಕಾಶಕ್ಕೆ ಕಳುಹಿಸುವರೋಚಕ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

ಪೆರೆಸಿಲ್ಡ್ ಮತ್ತು ಶಿಪೆಂಕೊ ಅವರನ್ನು ರಷ್ಯಾದ ‘ಸ್ಟಾರ್ ಸಿಟಿ’ಗೆ ಕಳುಹಿಸಲಾಗಿದೆ. ಸ್ಟಾರ್‌ ಸಿಟಿ ಎಂಬುದು ಮಾಸ್ಕೋದ ಹೊರವಲಯದಲ್ಲಿರುವ ರಷ್ಯಾದ ಬಾಹ್ಯಾಕಾಶ ಕಾರ್ಯಕ್ರಮ ಕೇಂದ್ರವಾಗಿದೆ. ಬಾಹ್ಯಾಕಾಶ ಪ್ರಯಾಣದ ನಂತರದ ಆರೈಕೆಗಾಗಿ ಅವರನ್ನು ‘ಸ್ಟಾರ್‌ ಸಿಟಿ’ಗೆ ಕರೆದೊಯ್ಯಲಾಗಿದ್ದು, ಒಂದು ವಾರಗಳ ಕಾಲ ಅವರಿಗೆ ಆರೈಕೆ ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.