
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ
ಕೀವ್: ‘ಇನ್ನೇನು ಚಳಿಗಾಲ ಆರಂಭವಾಗುತ್ತಿದೆ. ನಾವು ಬೆಚ್ಚಗೆ ಇರಬಾರದು, ಗೌರವದಿಂದ ಬದುಕಬಾರದು, ಕತ್ತಲಲ್ಲಿ ಇರಬೇಕು ಎಂದು ರಷ್ಯಾ ಪಣತೊಟ್ಟಿದೆ. ಆದರೆ, ನಾವು ದೀಪ ಉರಿಸುತ್ತಲೇ ಇರುತ್ತೇವೆ. ನಮ್ಮ ಮೇಲೆ ರಷ್ಯಾವು ವ್ಯವಸ್ಥಿತವಾದ ವಿದ್ಯುತ್ ಭಯೋತ್ಪಾದನೆ ನಡೆಸುತ್ತಿದೆ’ ಎಂದು ಉಕ್ರೇನ್‌ನ ಪ್ರಧಾನಿ ಯುಲಿಯಾ ಸ್ವೀರಿಡೆನ್ಕೊ ಹೇಳಿದರು.
ಚಳಿಗಾಲದಲ್ಲಿ ಮನೆ ಮನೆಗೆ ಬಿಸಿಗಾಳಿ ಪೂರೈಕೆಗೆ ಉಕ್ರೇನ್‌ನ ನಗರಗಳಲ್ಲಿ ಕೇಂದ್ರೀಕೃತವಾದ ವ್ಯವಸ್ಥೆ ಇದೆ. ಇದೇ ರೀತಿಯ ವ್ಯವಸ್ಥೆ ನೀರು ಸಂಪರ್ಕ ಮತ್ತು ಕೊಳವೆ ನೀರಿನ ನಿರ್ವಹಣೆಗೂ ಇದೆ. ಇಂಥ ಮೂಲಸೌಕರ್ಯಗಳ ಮೇಲೆ ರಷ್ಯಾವು ದಾಳಿ ನಡೆಸುತ್ತಿದೆ. ‘ರಷ್ಯಾವು ಸುಮಾರು 650 ಡ್ರೋನ್, 50ಕ್ಕೂ ಅಧಿಕ ಕ್ಷಿಪಣಿಗಳ ಮೂಲಕ ದಾಳಿ ನಡೆಸಿದೆ’ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದರು.
‘ಈ ದಾಳಿಗಳ ಕಾರಣದಿಂದ ದೇಶದಾದ್ಯಂತ ವಿದ್ಯುತ್ ಕೊರತೆ ಉಂಟಾಗಿದೆ. ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, 17 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ 2ರಿಂದ 16 ವರ್ಷದ ವಯೋಮಾನದವರು ಇದ್ದಾರೆ’ ಎಂದು ಅಧಿಕಾರಿಗಳು ಗುರುವಾರ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.