ADVERTISEMENT

ಬಂದೂಕು ಹಿಡಿದ ಮೇಲೆ ಭರವಸೆ ಮೂಡಿದೆ: ವೈರಲ್‌ ಆಯ್ತು ಉಕ್ರೇನ್‌ ಸಂಸದೆಯ ಫೋಟೊ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಫೆಬ್ರುವರಿ 2022, 15:57 IST
Last Updated 26 ಫೆಬ್ರುವರಿ 2022, 15:57 IST
ಉಕ್ರೇನ್ ಸಂಸದೆ ಕಿರಾ ರುಡಿಕ್
ಉಕ್ರೇನ್ ಸಂಸದೆ ಕಿರಾ ರುಡಿಕ್    

ಕೀವ್‌: ಕಲಾಶ್ನಿಕೋವ್(ಬಂದೂಕು) ಅನ್ನು ಹಿಡಿದ ಮೇಲೆ ನನಗೆ ಭರವಸೆ ಮೂಡಿದೆ ಎಂದು ಉಕ್ರೇನ್ ಸಂಸದೆ ಕಿರಾ ರುಡಿಕ್ ಸುದ್ದಿವಾಹಿನಿ ‘ಇಂಡಿಯಾ ಟುಡೇ’ಗೆ ಶನಿವಾರ ತಿಳಿಸಿದ್ದಾರೆ.

ಉಕ್ರೇನ್‌ನ ವಾಯ್ಸ್ ಪಾರ್ಟಿಯ ನಾಯಕಿಯೂ ಆಗಿರುವ ರುಡಿಕ್ ಅವರು ಬಂದೂಕು ಹಿಡಿದಿರುವ ಫೋಟೊವನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೊ ಈಗ ಜಗತ್ತಿನಾದ್ಯಂತ ವೈರಲ್‌ ಆಗಿದೆ.

‘ನಾನು ಬಂದೂಕನ್ನು ಬಳಸಲು ಕಲಿಯುತ್ತೇನೆ ಮತ್ತು ಶಸ್ತ್ರಾಸ್ತ್ರಗಳನ್ನು ಹೊರಲು ಸಿದ್ದವಾಗುತ್ತೇನೆ. ಇದು ಕಟುವಾಸ್ತವವಾಗಿದೆ. ಕೆಲವೇ ದಿನಗಳ ಹಿಂದೆ ಅದನ್ನು ನಾನು ಯೋಚಿಸಿಯೇ ಇರಲಿಲ್ಲ. ನಮ್ಮ ಮಹಿಳೆಯರೂ ನಮ್ಮ ಪುರುಷರಂತೆಯೇ ಈ ನೆಲವನ್ನು ರಕ್ಷಿಸಲಿದ್ದಾರೆ’ ಎಂದು ರುಡಿಕ್ ಬರೆದುಕೊಂಡಿದ್ದಾರೆ.

ADVERTISEMENT

ಈ ವಿಚಾರದ ಕುರಿತು ಇಂಡಿಯಾ ಟುಡೇ ಜೊತೆ ಮಾತನಾಡಿರುವ ಅವರು, ‘ಯುದ್ಧ ಪ್ರಾರಂಭವಾದಾಗಿನಿಂದ ನಾನು ತುಂಬಾ ಕೋಪಗೊಂಡಿದ್ದೇನೆ. ಉಕ್ರೇನ್‌ನ ಅಸ್ತಿತ್ವದ ಹಕ್ಕನ್ನು ನೆರೆಯ ದೇಶ (ರಷ್ಯಾ) ಹಾಗೂ ಪುಟಿನ್ ಹೇಗೆ ನಿರಾಕರಿಸಿರಬಹುದು ಎಂದು ನನಗೆ ಇನ್ನೂ ಅರ್ಥವಾಗುತ್ತಿಲ್ಲ’ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

‘ನನ್ನ ಕುಟುಂಬಕ್ಕೆ ಬೆದರಿಕೆ ಇದೆ. ಈ ನಗರವನ್ನು ತೊರೆಯಬೇಕೆಂದು ಹುಚ್ಚು ಸರ್ವಾಧಿಕಾರಿ ನಮಗೆ ಹೇಳುತ್ತಿದ್ದಾನೆ. ನಾವೆಲ್ಲರೂ ಬೆದರಿಕೆಗೆ ಒಳಗಾಗಿದ್ದೇವೆ’ ಎಂದು ರುಡಿಕ್ ಆತಂಕ ವ್ಯಕ್ತಪಡಿಸಿದ್ದಾರೆ.

‘ನಾನು ಕೀವ್‌ನಲ್ಲಿ ಉಳಿಯಲು ಬಯಸುತ್ತೇನೆ. ನನ್ನ ಸಂಗಾತಿ ಹಾಗೂ ಸ್ನೇಹಿತರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡಿದ್ದಾರೆ’ ಎಂದು ಅವರು ಹೇಳಿದ್ದಾರೆ.

‘ನಾನು ನನ್ನ ಕುಟುಂಬವನ್ನು ರಕ್ಷಿಸುತ್ತಿದ್ದೇನೆ. ನಮ್ಮ ಬೀದಿಗಳಲ್ಲಿ ರಷ್ಯಯನ್ನರ ವಿರುದ್ಧ ಹೋರಾಡುವ ಪ್ರತಿರೋಧದ ಗುಂಪನ್ನು ನಾನು ಸಂಘಟಿಸುತ್ತಿದ್ದೇನೆ. ಅವರು ತಮ್ಮ ಸ್ಥಳಕ್ಕೆ ಹಿಂತಿರುಗಬೇಕು. ಏಕೆಂದರೆ, ನಾವು ಸ್ವತಂತ್ರ ದೇಶವಾಗಿದ್ದೇವೆ. ನಮ್ಮ ಸಾರ್ವಭೌಮತ್ವವನ್ನು ರಕ್ಷಿಸುತ್ತೇವೆ. ನಾನು ಹಾಗೂ ನನ್ನ ಮಕ್ಕಳು ಉಕ್ರೇನ್‌ನಲ್ಲಿ ವಾಸಿಸಬೇಕೆಂದು ಬಯಸುತ್ತೇವೆ’ ಎಂದು ರುಡಿಕ್‌ ತಿಳಿಸಿದ್ದಾರೆ.

ಈ ಪ್ರತಿರೋಧವನ್ನು ಪುಟಿನ್‌ ನಿರೀಕ್ಷಿಸಿರಲಿಲ್ಲ

ಉಕ್ರೇನ್‌ನಲ್ಲಿ ತಮ್ಮ ಸೈನಿಕರು ಎದುರಿಸುತ್ತಿರುವ ಪ್ರತಿರೋಧವನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಿರೀಕ್ಷಿಸಿರಲಿಲ್ಲ ಎಂದು ಉಕ್ರೇನ್‌ ಸಂಸದೆ ಅಭಿಪ್ರಾಯಪಟ್ಟಿದ್ದಾರೆ.

ಪುಟಿನ್, ತನ್ನ ಮನಸ್ಸನ್ನು ಬದಲಿಸಿ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಾನೆ ಎಂದು ನಾನು ಭಾವಿಸುತ್ತೇನೆ. ಆ ನಂತರ ನಾವು ಸಹಜ ಸ್ಥಿತಿಗೆ ಮರಳಬಹುದು. ನಾನು ಈ ಬಂದೂಕನ್ನು ಬಿಟ್ಟು ಬದುಕಬಹುದು ಎಂದೂ ರುಡಿಕ್‌ ಹೇಳಿದ್ದಾರೆ.

‘ಅವನು (ಪುಟಿನ್) ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳದಿದ್ದರೆ, ನಮ್ಮ ನೆಲದ ಪ್ರತಿಯೊಂದು ಇಂಚಿಗಾಗಿ ನಾವು ಹೋರಾಡಲಿದ್ದೇವೆ. ಇಡೀ ಉಕ್ರೇನ್ ಅದಕ್ಕೆ ಸಿದ್ಧವಾಗಿದೆ’ ಎಂದು ಅವರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.