ರಷ್ಯಾ ಅಧ್ಯಕ್ಷ ಪುಟಿನ್, ಭಾರತದ ಪ್ರಧಾನಿ ನರೇಂದ್ರ ಮೋದಿ
ಪಿಟಿಐ ಚಿತ್ರ
ಮಾಸ್ಕೊ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಇದೇ ವರ್ಷ ಡಿಸೆಂಬರ್‌ನಲ್ಲಿ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಕ್ರೆಮ್ಲಿನ್‌ನ ವಿದೇಶಾಂಗ ನೀತಿ ಸಹಾಯಕ ಯುರಿ ಉಷಕೋವ್ ಶುಕ್ರವಾರ ತಿಳಿಸಿದ್ದಾರೆ.
ಚೀನಾದ ಟಿಯಾನ್‌ಜಿನ್ ನಗರದಲ್ಲಿ ಭಾನುವಾರದಿಂದ ಶಾಂಘೈ ಶೃಂಗಸಭೆ ಆರಂಭವಾಗಲಿದೆ. ಇದರಲ್ಲಿ ಭಾಗಿಯಾಗಲಿರುವ ಪುಟಿನ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸೋಮವಾರ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎಂದು ಉಷಕೋವ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, 'ಶಾಂಘೈ ಶೃಂಗಸಭೆ ವೇಳೆ (ಸೆಪ್ಟೆಂಬರ್ 1ರಂದು) ನಮ್ಮ ಅಧ್ಯಕ್ಷರು ಮೋದಿ ಅವರನ್ನು ಭೇಟಿಯಾಗಲಿದ್ದಾರೆ. ಡಿಸೆಂಬರ್‌ನಲ್ಲಿ ಭಾರತ ಪ್ರವಾಸ ಕೈಗೊಳ್ಳುವುದಕ್ಕೆ ಸಿದ್ಧತೆಗಳ ಕುರಿತು ಚರ್ಚಿಸಲಿದ್ದಾರೆ ಎಂಬುದು ವಿಶೇಷ' ಎಂದಿದ್ದಾರೆ.
ಟಿಯಾನ್‌ಜಿನ್‌ನಲ್ಲಿ ಉಭಯ ನಾಯಕರು ಮುಖಾಮುಖಿಯಾಗುತ್ತಿರುವುದು ಈ ವರ್ಷದ ಮೊದಲ ಭೇಟಿಯಾಗಿದೆ. ಆದರೆ, ದೂರವಾಣಿ ಮೂಲಕ ನಿರಂತರ ಸಂಪರ್ಕದಲ್ಲಿದ್ದಾರೆ ಎಂದೂ ಮಾಹಿತಿ ನೀಡಿದ್ದಾರೆ.
ಭಾರತವು ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲ ಖರೀದಿಸುವುದನ್ನು ವಿರೋಧಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಆಮದಾಗುವ ಉತ್ಪನ್ನಗಳ ಮೇಲಿನ ಸುಂಕವನ್ನು ಶೇ 50ಕ್ಕೆ ಏರಿಸಿದ್ದಾರೆ. ಇದೇ ಹೊತ್ತಿನಲ್ಲಿ, ಮೋದಿ, ಪುಟಿನ್ ಸಭೆ ಸೇರಲಿರುವುದು ಮಹತ್ವ ಪಡೆದುಕೊಂಡಿದೆ.
ರಷ್ಯಾ 2022ರಲ್ಲಿ ಉಕ್ರೇನ್ ಮೇಲೆ ಆಕ್ರಮಣ ಆರಂಭಿಸಿತ್ತು. ಇದಾದ ನಂತರ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾ ಮೇಲೆ ನಿರ್ಬಂಧಗಳು ವಿಧಿಸಿವೆ. ಇದೀಗ ರಷ್ಯಾ, ಭಾರತದ ಪ್ರಮುಖ ಇಂಧನ ಪೂರೈಕೆದಾರ ರಾಷ್ಟ್ರವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.