ADVERTISEMENT

ರಜೆ ಮೇಲೆ ತೆರಳುವಂತೆ ಹಸೀನಾ ಪುತ್ರಿ ಸೈಮಾಗೆ ಡಬ್ಲ್ಯುಎಚ್‌ಒ ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 0:22 IST
Last Updated 13 ಜುಲೈ 2025, 0:22 IST
ಸೈಮಾ ವಾಝೆದ್
ಸೈಮಾ ವಾಝೆದ್   

ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಆಗ್ನೇಯ ಏಷ್ಯಾದ ನಿರ್ದೇಶಕಿ, ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಪುತ್ರಿ ಸೈಮಾ ವಾಝೆದ್ ಅವರನ್ನು ರಜೆಯ ಮೇಲೆ ತೆರಳುವಂತೆ ಡಬ್ಲ್ಯುಎಚ್‌ಒ ಸೂಚಿಸಿದೆ.

ಡಬ್ಲ್ಯುಎಚ್‌ಒದಲ್ಲಿ ಉದ್ಯೋಗ ‍ಪಡೆಯಲು ಶೈಕ್ಷಣಿಕ ಅರ್ಹತೆ ಮತ್ತು ತಾವು ನಡೆಸುವ ಪ್ರತಿಷ್ಠಾನಕ್ಕೆ ಹಣ ಸಂಗ್ರಹಿಸಲು ಅಧಿಕಾರದ ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಿ ಬಾಂಗ್ಲಾದೇಶದ ಭ್ರಷ್ಟಾಚಾರ ನಿಗ್ರಹ ಆಯೋಗವು ಅವರ ವಿರುದ್ಧ ಕೆಲ ತಿಂಗಳ ಹಿಂದೆಯಷ್ಟೆ ಪ್ರಕರಣ ದಾಖಲಿಸಿತ್ತು.

ಸೈಮಾ ಅವರು ಶುಕ್ರವಾರದಿಂದ ರಜೆಯಲ್ಲಿರುವುದಾಗಿ ಡಬ್ಲ್ಯುಎಚ್‌ಒ ಮಹಾ ನಿರ್ದೇಶಕ ಟೆಡ್ರೊಸ್‌ ಅದನೊಮ್‌ ಗೆಬ್ಸಿಯೆಸಸ್‌ ಅವರು ಸಿಬ್ಬಂದಿಗೆ ಇ–ಮೇಲ್ ಹಂಚಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ADVERTISEMENT

‘ಸೈಮಾ ಅವರು ಪ್ರಸ್ತುತ ರಜೆಯಲ್ಲಿದ್ದಾರೆ. ಈ ಅವಧಿಯಲ್ಲಿ ಕ್ಯಾಥರೀನಾ ಬೊಹ್ಮೆ ಅವರಿಗೆ ಉಸ್ತುವಾರಿ ವಹಿಸಲಾಗಿದೆ’ ಎಂದು ಡಬ್ಲ್ಯುಎಚ್‌ಒ ತಿಳಿಸಿದೆ.

2023ರಲ್ಲಿ ನಡೆದ ಸೈಮಾ ಅವರ ಆಯ್ಕೆ ವೇಳೆ ವಿವಾದ ಏರ್ಪಟ್ಟಿತ್ತು. ಪ್ರಧಾನಿ ಹಸೀನಾ ತಮ್ಮ ಮಗಳಿಗೆ ಡಬ್ಲ್ಯುಎಚ್‌ಒ ಹುದ್ದೆಗಾಗಿ ಪ್ರಧಾನಿ ಕಚೇರಿಯಿಂದ ಲಾಬಿ ಮಾಡಿದ್ದರು ಎಂಬ ‌ಆರೋಪ ಕೇಳಿ ಬಂದಿತ್ತು. ಅದಾಗ್ಯೂ, ಈ ಆರೋಪಕ್ಕೆ ಭಾರತವಾಗಲಿ, ಬಾಂಗ್ಲಾದೇಶವಾಗಲಿ ಪ್ರತಿಕ್ರಿಯಿಸಿರಲಿಲ್ಲ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.