ADVERTISEMENT

ಖ್ಯಾತ ಲೇಖಕ ಸಲ್ಮಾನ್‌ ರಶ್ದಿಗೆ ‘ಪೆನ್‌ ಸೆಂಟನರಿ ಕರೇಜ್‌ ಪ್ರಶಸ್ತಿ’ ಗೌರವ

ಪಿಟಿಐ
Published 19 ಮೇ 2023, 16:13 IST
Last Updated 19 ಮೇ 2023, 16:13 IST
ಸಲ್ಮಾನ್‌ ರಶ್ದಿ
ಸಲ್ಮಾನ್‌ ರಶ್ದಿ   

ನ್ಯೂಯಾರ್ಕ್‌: ಖ್ಯಾತ ಲೇಖಕ ಸಲ್ಮಾನ್‌ ರಶ್ದಿ ಅವರಿಗೆ ಗುರುವಾರ ರಾತ್ರಿ ಪ್ರತಿಷ್ಠಿತ ‘ಪೆನ್‌ ಸೆಂಟನರಿ ಕರೇಜ್‌ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ.

75 ವರ್ಷದ ರಶ್ದಿ ಅವರಿಗೆ, ನ್ಯೂಯಾರ್ಕ್‌ನ ಮ್ಯಾನ್‌ಹಟ್ಟನ್‌ನಲ್ಲಿರುವ ‘ಅಮೆರಿಕನ್ ಮ್ಯೂಸಿಯಮ್‌ ಆಫ್‌ ನ್ಯಾಚುರಲ್‌ ಹಿಸ್ಟರಿ’ಯಲ್ಲಿ ನಡೆದ ‘2023ರ ಲಿಟರರಿ ಗಾಲಾ’ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಲಾಯಿತು.

ಕಳೆದ ವರ್ಷ ಸಾಹಿತ್ಯ ಸಮಾರಂಭವೊಂದರಲ್ಲಿ ಚಾಕು ಇರಿತಕ್ಕೆ ಒಳಗಾಗಿದ್ದ ರಶ್ದಿ ಅವರು, ಗುಣಮುಖರಾದ ಬಳಿಕ ಕಾಣಿಸಿಕೊಂಡ ಮೊದಲ ಸಾರ್ವಜನಿಕ ಸಮಾರಂಭ ಇದಾಗಿದೆ.

ADVERTISEMENT

ಸಮಾರಂಭಲ್ಲಿ ಪಾಲ್ಗೊಂಡಿದ್ದ ವೀಕ್ಷಕರು ರಶ್ದಿ ಅವರಿಗೆ ಎದ್ದು ನಿಂತು ಗೌರವ ಸೂಚಿಸಿದರು. ಆ ಬಳಿಕ ಮಾತನಾಡಿದ  ಅವರು, ‘ಪೆನ್‌ (ಕವಿಗಳು, ಪ್ರಬಂಧಕಾರರು ಮತ್ತು ಕಾದಂಬರಿಕಾರರ) ಗುಂಪಿನೊಂದಿಗೆ ನಾನು ದೀರ್ಘ ಕಾಲದ ನಂಟು ಹೊಂದಿದ್ದೇನೆ. ಇಲ್ಲಿ ನೆರೆದಿರುವ ಬರಹಗಾರರು ಹಾಗೂ ಪುಸ್ತಕ ಪ್ರೇಮಿಗಳ ನಡುವೆ ನಾನು ಮತ್ತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಖುಷಿ ನೀಡಿದೆ’ ಎಂದರು.

2022ರ ಆಗಸ್ಟ್‌ 12ರಂದು ನ್ಯೂಯಾರ್ಕ್‌ನ ಷಟೌಕ್ವಾ ಇನ್‌ಸ್ಟಿಟ್ಯೂಟ್‌ನಲ್ಲಿ ಮಾರಣಾಂತಿಕ ದಾಳಿ ನಡೆದಾಗ ತಮ್ಮನ್ನು ರಕ್ಷಿಸಿದ ಹಿರೋಗಳ ಪರವಾಗಿ ಈ ಪ್ರಶಸ್ತಿ ಸ್ವೀಕಾರ ಮಾಡುತ್ತಿರುವುದಾಗಿ ಹೇಳಿದ ರಶ್ದಿ ಅವರು, ‘ಒಂದು ವೇಳೆ ಅಂದು ಅವರಿಲ್ಲದಿದ್ದರೆ ಬಹುಶಃ ಇಂದು ನಾನು ಇಲ್ಲಿ ಇರುತ್ಲಿಲ್ಲ. ಅಂದು ನನ್ನನ್ನು ಕೊಲ್ಲಲು ಹೊಂಚು ಹಾಕಲಾಗಿತ್ತು. ಆ ದಿನ ನನ್ನನ್ನು ಕಾಪಾಡಿವರಲ್ಲಿ ಧೈರ್ಯ ಇತ್ತು. ನಾನು ಅವರಿಗೆ ಜೀವನಪೂರ್ತಿ ಋಣಿಯಾಗಿರುತ್ತೇನೆ’ ಎಂದು ಹೇಳಿದರು.

‘ಭಯೋತ್ಪಾದನೆ ನಮ್ಮನ್ನು ಭಯಗೊಳಿಸಬಾರದು. ಹಿಂಸೆ ನಮ್ಮನ್ನು ತಡೆಯಬಾರದು. ಹೋರಾಟ ನಿರಂತರವಾಗಿ ಸಾಗುತ್ತಿರಬೇಕು’ ಎಂದು ಅವರು ತಿಳಿಸಿದರು.

‘ಪೆನ್‌ ಅಮೆರಿಕ’ ಅಧ್ಯಕ್ಷ, ನಾಟಕಕಾರ ಮತ್ತು ಕಾದಂಬರಿಕಾರ ಅಯಾದ್‌ ಅಖ್ತರ್‌ ಅವರು, ‘ರಶ್ದಿ ಅವರು ನಿರಂತರವಾಗಿ ತೆಗೆದುಕೊಂಡ ನಿಲುವುಗಳಿಗಾಗಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ’ ಎಂದರು.

ರಶ್ದಿ ಅವರ ಮೇಲಿನ ದಾಳಿಗೆ ಜಾಗತಿಕ ಮಟ್ಟದಲ್ಲಿ ಖಂಡನೆ ವ್ಯಕ್ತವಾಗಿತ್ತು. ರಶ್ದಿ ಅವರ ‘ದಿ ಸಟಾನಿಕ್ ವರ್ಸಸ್‌’ ಕಾದಂಬರಿ ಪ್ರಕಟವಾದ ಬಳಿಕ ಅವರ ಹತ್ಯೆ ಮಾಡುವಂತೆ 1998ರಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯಾತ್‌ ಉಲ್ಲಾ ಖೊಮೇನಿ ಫತ್ವಾ ಹೊರಡಿಸಿದ್ದರು. ಹಾಗಾಗಿ ಹಲವು ವರ್ಷ ರಶ್ದಿ ತಲೆ ಮರೆಸಿಕೊಂಡಿದ್ದರು. ನಂತರ ಕಳೆದ ವರ್ಷ ಆಗಸ್ಟ್‌ 12ರಂದು ನ್ಯೂಯಾರ್ಕ್‌ನ ಷಟೌಕ್ವಾ ಇನ್‌ಸ್ಟಿಟ್ಯೂಟ್‌ನ ಕಾರ್ಯಕ್ರಮದಲ್ಲಿ ರಶ್ದಿ ಪಾಲ್ಗೊಂಡಿದ್ದಾಗ ಹದಿ ಮಟರ್ ಎಂಬಾತ ಅವರಿಗೆ ಚಾಕುವಿನಿಂದ ಇರಿದಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.