
ಲಾಸ್ ಏಂಜಲೀಸ್: ಇಸ್ರೇಲ್ ಸರ್ಕಾರವನ್ನು ಟೀಕಿಸಿ ಭಾಷಣ ಮಾಡಿದ ಬ್ರಿಟಿಷ್ ರಾಜಕೀಯ ವಿಮರ್ಶಕ, ಪತ್ರಕರ್ತ ಸಮಿ ಹಮ್ದಿ ಅವರನ್ನು ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ (ಐಸಿಇ) ಅಧಿಕಾರಿಗಳು ಸೋಮವಾರ ಸ್ಯಾನ್‌ಫ್ರಾನ್ಸಿಸ್ಕೊ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊದಲ್ಲಿ ‘ಮುಸ್ಲಿಂ ನಾಗರಿಕ ಹಕ್ಕುಗಳ ಸಂಸ್ಥೆ –ಸಿಎಐಆರ್’ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಮಿ, ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಸೇನೆ ನಡೆಸಿದ ದಾಳಿಯನ್ನು ಖಂಡಿಸಿದ್ದರು.
‘ಇಸ್ರೇಲ್ ಸೇನೆ ವಿರುದ್ಧ ಸಾರ್ವಜನಿಕವಾಗಿ ಪ್ರತಿಭಟನೆ ನಡೆಸಿದವರನ್ನು ಮತ್ತು ಈ ಪ್ರತಿಭಟನೆಗೆ ಬೆಂಬಲ ನೀಡಿದವರನ್ನು ಟ್ರಂಪ್ ಆಡಳಿತವು ಹುಡುಕಿ, ದೇಶದಿಂದ ಹೊರ ಹಾಕುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಇಸ್ರೇಲ್ ಸೇನೆ ವಿರುದ್ಧ ಟೀಕೆ ಮಾಡಿದವರಿಗೆ ಅಮೆರಿಕದ ವೀಸಾ ನಿರಾಕರಿಸಲಾಗುತ್ತದೆ’ ಎಂದು ಸಿಎಐಆರ್ ಆರೋಪಿಸಿದೆ. ಈ ವಿಷಯವಾಗಿ ಸಮಿ ಭಾಷಣ ಮಾಡಿದ್ದರು.
‘ಹಮ್ದಿ ಇನ್ನೂ ಅಮೆರಿಕದ ಕಸ್ಟಡಿಯಲ್ಲೇ ಇದ್ದಾರೆ. ಅವರನ್ನು ಗಡಿಪಾರು ಮಾಡಿಲ್ಲ. ತಕ್ಷಣವೇ ಅವರನ್ನು ಬಿಡುಗಡೆ ಮಾಡಬೇಕು’ ಎಂದು ಸಿಎಐಆರ್ ಆಗ್ರಹಿಸಿದೆ.
ಹಮ್ದಿ ಬಂಧನದ ಬಗ್ಗೆ ಅಮೆರಿಕದ ‘ಐಸಿಇ’ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ‘ಹಮ್ದಿ ಪ್ರವಾಸಿ ವೀಸಾದಡಿ ಅಮೆರಿಕಕ್ಕೆ ಭೇಟಿ ನೀಡಿದ್ದಾರೆಯೇ ಹೊರತು ಬ್ರಿಟಿಷ್ ನಾಗರಿಕರಿಗೆ ಲಭ್ಯವಿರುವ ವೀಸಾ ಮನ್ನಾ ಸೌಲಭ್ಯದಡಿ ಅಲ್ಲ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.