ADVERTISEMENT

ಸುಪ್ರೀಂ ತೀರ್ಪಿನಿಂದ ನಿರ್ಧಾರ ಬದಲಿಸಿದೆ: ಪರ್ವೇಜ್‌ ಮುಷರಫ್‌

ಪಾಕಿಸ್ತಾನದ ಮಾಜಿ ಅಧ್ಯಕ್ಷ ಹೇಳಿಕೆ

ಪಿಟಿಐ
Published 21 ಜೂನ್ 2018, 15:41 IST
Last Updated 21 ಜೂನ್ 2018, 15:41 IST
ಮುಷರಫ್‌
ಮುಷರಫ್‌   

ಕರಾಚಿ: ‘ಪಾಕಿಸ್ತಾನಕ್ಕೆ ಕಾಲಿಟ್ಟ ತಕ್ಷಣವೇ ಬಂಧಿಸುವಂತೆ ಸುಪ್ರೀಂಕೋರ್ಟ್‌ ಆದೇಶ ನೀಡಿದ್ದ ಕಾರಣ, ಸ್ವದೇಶಕ್ಕೆ ಹಿಂತಿರುಗುವ ಆಲೋಚನೆಯನ್ನು ಕೈಬಿಡುವಂತಾಯಿತು’ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್‌ ತಿಳಿಸಿದ್ದಾರೆ.

ದೇಶದಿಂದ ಗಡಿಪಾರುಗೊಂಡಿರುವ ಮುಷರಫ್‌ 2016ರಿಂದ ದುಬೈನಲ್ಲಿ ನೆಲೆಸಿದ್ದಾರೆ.ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ನ್ಯಾಯಾಲಯದ ಮುಂದೆ ಹಾಜರಾಗುವ ತನಕ ನನ್ನ ಬಂಧನವನ್ನು ತಡೆದಿದ್ದರೆ ನಾನು ದೇಶಕ್ಕೆ ಹಿಂತಿರುಗುವ ಬಗ್ಗೆ ಆಲೋಚಿಸುತ್ತಿದ್ದೆ. ದೇಶಕ್ಕೆ ಕಾಲಿಟ್ಟ ತಕ್ಷಣವೇ ಬಂಧಿಸಬೇಕೆಂದಿರುವುದರಿಂದ, ಅಲ್ಲಿಗೆ ಬಂದಿದ್ದರೂ ಯಾವುದೇ ಪ್ರಯೋಜನವಾಗುತ್ತಿರಲಿಲ್ಲ’ ಎಂದು ತಿಳಿಸಿದರು.

ದೇಶದ ಸಂವಿಧಾನ ತತ್ವಗಳನ್ನು ಬುಡಮೇಲು ಮಾಡಲು ಯತ್ನಿಸಿದ ವಿಚಾರಕ್ಕೆ ಸಂಬಂಧಿಸಿದಂತೆ, ಮುಷರಫ್‌ ವಿರುದ್ಧಸುಪ್ರೀಂಕೋರ್ಟ್‌, ಹೈಕೋರ್ಟ್‌ನಲ್ಲಿ ಹಲವು ಪ್ರಕರಣಗಳಿವೆ. ಒಂದೊಮ್ಮೆ ದೇಶಕ್ಕೆ ಕಾಲಿಟ್ಟರೆ, ತಕ್ಷಣವೇ ಬಂಧಿಸಬೇಕು ಎಂದು ಸುಪ್ರೀಂಕೋರ್ಟ್‌ ಆದೇಶ ನೀಡಿತ್ತು.

ADVERTISEMENT

ಇದೇ ಜುಲೈ 25ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪ‍ರ್ಧಿಸಲು ನಿರ್ಧರಿಸಿದರೆ, ಪಾಕಿಸ್ತಾನಕ್ಕೆ ಹಿಂತಿರುಗಬೇಕು ಎಂದು ಸುಪ್ರೀಂಕೋರ್ಟ್‌ ತೀರ್ಪಿನಲ್ಲಿ ಸ್ಪಷ್ಟಪಡಿಸಿತ್ತು.

‘ನಾನು ಹೇಡಿಯಲ್ಲ ಎಂಬುದು ಇಡೀ ಪ್ರಪಂಚಕ್ಕೆ ಗೊತ್ತಿದೆ. ದೇಶಕ್ಕೆ ಹಿಂತಿರುಗಲು ಸೂಕ್ತ ಸಮಯಕ್ಕಾಗಿ ಎದುರು ನೋಡುತ್ತಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.