ಒಷಿಯನ್ ಇನ್ಫಿನಿಟಿ ಹಡಗು, ಮಲೇಷ್ಯಾ ಏರ್‌ಲೈನ್ಸ್ ವಿಮಾನ
ಬೆಂಗಳೂರು: ನಾಪತ್ತೆಯಾಗಿರುವ ಮಲೇಷ್ಯಾ ಏರ್‌ಲೈನ್ಸ್‌ನ ಎಂಎಚ್ 370 ವಿಮಾನದ ಶೋಧಕಾರ್ಯ ಹಲವು ವರ್ಷಗಳ ನಂತರ ಮತ್ತೆ ಆರಂಭವಾಗುತ್ತಿದೆ.
239 ಮಂದಿ ಪ್ರಯಾಣಿಸುತ್ತಿದ್ದ ಆ ನತದೃಷ್ಟ ವಿಮಾನ 2014ರ ಮಾರ್ಚ್ 8ರಂದು ಕಣ್ಮರೆಯಾಗಿತ್ತು.
ಬ್ರಿಟನ್‌ನ ಸಾಗರ ಸಂಶೋಧನಾ ಕಂಪನಿ ಒಷಿಯನ್ ಇನ್ಫಿನಿಟಿ, ಎಂಎಚ್ 370 ವಿಮಾನವನ್ನು ಹುಡುಕಾಡುವ ಕೆಲಸವನ್ನು ಆರಂಭಿಸುತ್ತಿದೆ. ತನ್ನ ಅತ್ಯಾಧುನಿಕ ಹಡಗುಗಳನ್ನು, ಸಲಕರಣೆಗಳನ್ನು ಸಮುದ್ರದಾಳಕ್ಕೆ ಇಳಿಸುತ್ತಿದೆ ಎಂದು ಮಲೇಷ್ಯಾದ ಸಾರಿಗೆ ಸಚಿವ ಆಂಥೋನಿ ಲೋಕ್ ಹೇಳಿದ್ದಾರೆ.
ಆದರೆ ಈ ಹುಡುಕಾಟಕ್ಕೆ ಒಷಿಯನ್ ಇನ್ಫಿನಿಟಿ ಕಂಪನಿಗೆ ಯಾವುದೇ ಗಡುವನ್ನು ವಿಧಿಸುತ್ತಿಲ್ಲ. ಹೊಸ ಆಶಾಭಾವನೆಯೊಂದಿಗೆ ಹುಡುಕಾಟಕ್ಕೆ ಅವರು ಸಿದ್ಧರಿದ್ದಾರೆ ಎಂದು ಹೇಳಿದ್ದಾರೆ. ಈ ಕುರಿತು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಸೇರಿದಂತೆ ಅನೇಕ ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ವಿಮಾನ ಕಣ್ಮರೆಯಾದಾಗಿನಿಂದ 2018ರವರೆಗೆ ದಕ್ಷಿಣ ಹಿಂದೂ ಮಹಾಸಾಗರದಲ್ಲಿ ವಿಮಾನಕ್ಕಾಗಿ ಸಾಕಷ್ಟು ಶೋಧ ಕಾರ್ಯ ನಡೆಸಲಾಗಿತ್ತು. ಆದರೆ ಆ ವಿಮಾನದ ಕುರಿತು ಇನ್ನೂ ಯಾವುದೇ ಅಧಿಕೃತ ಸುಳಿವು ಸಿಕ್ಕಿಲ್ಲ.
ಸತತ ನಾಲ್ಕು ವರ್ಷ ಮಲೇಷ್ಯಾ, ಚೀನಾ, ಆಸ್ಟ್ರೇಲಿಯಾ ಹಾಗೂ ಜಗತ್ತಿನ ಇತರ ಅನೇಕ ದೇಶಗಳು ಮುಂದೆ ನಿಂತು ಲಭ್ಯವಿರುವ ಎಲ್ಲ ತಂತ್ರಗಳನ್ನು ಉಪಯೋಗಿಸಿ ಶೋಧ ಕಾರ್ಯ ನಡೆಸಿದರೂ ಇದುವರೆಗೆ ಆ ವಿಮಾನ ಏನಾಯಿತು? ಅದರಲ್ಲಿದ್ದವರು ಏನಾದರು? ಎನ್ನುವುದು ಅಧಿಕೃತವಾಗಿ ತಿಳಿದು ಬಂದಿಲ್ಲ. 2018 ರಲ್ಲಿ ಯಾವುದೇ ನಿಖರ ಫಲಿತಾಂಶ ಇಲ್ಲದೇ ಶೋಧ ಕಾರ್ಯಾಚರಣೆಯೂ ಅಧಿಕೃತವಾಗಿ ಅಂತ್ಯಗೊಂಡಿತ್ತು. ಈಗ ಮತ್ತೆ ಆರಂಭವಾಗುತ್ತಿದೆ.
2019 ರಲ್ಲಿ, ’ಎಂಎಚ್ 370 ವಿಮಾನ ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಬಿದ್ದಿರಬಹುದು. ಆದರೆ, ಅದು ಬಿದ್ದ ನಿಖರ ಸ್ಥಳ ಮತ್ತು ವಿಮಾನವಿರುವ ಸ್ಥಳ ಹುಡುಕಲು ಸಾಧ್ಯವಾಗಿಲ್ಲ’ ಎಂದು ಮಲೇಷ್ಯಾ ಸರ್ಕಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿತ್ತು.
ದಕ್ಷಿಣದ ಹಿಂದೂ ಮಹಾಸಾಗರದ 1,20,000 ಚ.ಕಿ.ಮೀ. ವ್ಯಾಪ್ತಿಯಲ್ಲಿ ಶೋಧ ನಡೆಸಿರುವುದಾಗಿ ಚೀನಾ, ಮಲೇಷ್ಯಾ ಹಾಗೂ ಆಸ್ಟ್ರೇಲಿಯಾ ಜಂಟಿ ಹೇಳಿಕೆ ತಿಳಿಸಿದ್ದವು.
‘ಲಭ್ಯವಿರುವ ಅತ್ಯುತ್ತಮ ತಂತ್ರಜ್ಞಾನ ಹಾಗೂ ಶ್ರೇಷ್ಠ ತಜ್ಞರ ಸಹಾಯ ಪಡೆದು ಎಲ್ಲಾ ರೀತಿಯ ಪ್ರಯತ್ನ ಮಾಡಿದರೂ ವಿಮಾನ ಪತ್ತೆಯಾಗದಿರುವುದು ಬೇಸರ ತಂದಿದೆ’ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿತ್ತು.
ಜಾಗತಿಕ ವಿಮಾನಯಾನ ಇತಿಹಾಸದಲ್ಲಿ ಈ ವಿಮಾನದ ದುರಂತವನ್ನು ಅತ್ಯಂತ ದೊಡ್ಡದಾದ ನಿಗೂಢ ವಿಮಾನ ದುರಂತ ಹಾಗೂ ಅತ್ಯಂತ ದೊಡ್ಡ ಹುಡುಕಾಟ ಎಂದು ಪರಿಗಣಿಸಲಾಗಿದೆ. ಆ ವಿಮಾನದಲ್ಲಿ ಚೀನಾ ಪ್ರಜೆಗಳೇ ಹೆಚ್ಚಿದ್ದರು.
ದುರಂತಕ್ಕೆ ಅನೇಕ ತಜ್ಞರು ತಮ್ಮದೇಯಾದ ಥಿಯರಿಗಳನ್ನು ಮಂಡಿಸಿದ್ದರು. ಇನ್ನೂ ಕೆಲವರು ಇದು ಏಲಿಯನ್‌ಗಳ ಕೈವಾಡ ಇರಬಹುದು ಎಂದು ಶಂಕಿಸಿದ್ದರು. ಇದೊಂದು ಪೈಲಟ್ ಆತ್ಮಾಹುತಿ ಇರಬಹುದು ಎಂದು ಕೆಲವರು ಹೇಳಿದ್ದರು.
ವಿಮಾನ ನಾಪತ್ತೆಯಾಗಿ 11 ವರ್ಷಗಳೇ ಕಳೆದರೂ ಅದರಲ್ಲಿ ತಮ್ಮವರು ಇನ್ನೂ ಬದುಕಿರಬಹುದು ಎಂದು ಸಂತ್ರಸ್ತರ ಕುಟುಂಬದವರು ಈಗಲೂ ಆಶಾಭಾವನೆ ವ್ಯಕ್ತಪಡಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.