ADVERTISEMENT

ರಷ್ಯಾ– ಉಕ್ರೇನ್ ಬಿಕ್ಕಟ್ಟಿಗೆ ಶಾಂತಿಯುತ ಪರಿಹಾರ: ವಿಶ್ವಸಂಸ್ಥೆ ನಿರ್ಣಯ

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿರ್ಣಯಕ್ಕೆ ಸರ್ವಾನುಮತದ ಅಂಗೀಕಾರ 

​ಪ್ರಜಾವಾಣಿ ವಾರ್ತೆ
Published 7 ಮೇ 2022, 14:36 IST
Last Updated 7 ಮೇ 2022, 14:36 IST
ಉಕ್ರೇನಿನ ಕೀವ್‌ ನಗರದ ವಾಯವ್ಯದ ಮೊಶ್ಚುನ್ ಗ್ರಾಮದಲ್ಲಿ ರಷ್ಯಾ ಬಾಂಬ್‌ ದಾಳಿಗೆ ನಾಶವಾದ ವಸತಿ ಪ್ರದೇಶದ ವೈಮಾನಿಕ ನೋಟ – ಎಎಫ್‌ಪಿ ಚಿತ್ರ
ಉಕ್ರೇನಿನ ಕೀವ್‌ ನಗರದ ವಾಯವ್ಯದ ಮೊಶ್ಚುನ್ ಗ್ರಾಮದಲ್ಲಿ ರಷ್ಯಾ ಬಾಂಬ್‌ ದಾಳಿಗೆ ನಾಶವಾದ ವಸತಿ ಪ್ರದೇಶದ ವೈಮಾನಿಕ ನೋಟ – ಎಎಫ್‌ಪಿ ಚಿತ್ರ   

ವಿಶ್ವಸಂಸ್ಥೆ: ‘ರಷ್ಯಾ ಮತ್ತು ಉಕ್ರೇನ್ ಬಿಕ್ಕಟ್ಟಿಗೆ ಶಾಂತಿಯುತ ಪರಿಹಾರ ಕಂಡುಕೊಳ್ಳಬೇಕು’ ಎಂಬ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರ ನಿಲುವನ್ನು ಭದ್ರತಾ ಮಂಡಳಿಯು ಸರ್ವಾನುಮತದಿಂದ ಅಂಗೀಕರಿಸಿದೆ. ಗುಟೆರೆಸ್‌ ಅವರ ಪ್ರಯತ್ನಗಳಿಗೆ ಮಂಡಳಿಯು ಪ್ರಬಲವಾದ ಬೆಂಬಲವನ್ನೂ ವ್ಯಕ್ತಪಡಿಸಿದೆ.

ರಷ್ಯಾ ಫೆ.24ರಂದು ಉಕ್ರೇನ್‌ ಮೇಲೆ ಆರಂಭಿಸಿದ ಸೇನಾ ಕಾರ್ಯಾಚರಣೆಯ ನಂತರ ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಉಕ್ರೇನ್‌ ಬಿಕ್ಕಟ್ಟು ಶಮನಕ್ಕೆ ಸರ್ವಾನುಮತದ ಹೇಳಿಕೆ ಬಂದಿದ್ದು, ‘ಶಾಂತಿ ಮತ್ತು ಭದ್ರತೆಯ ಸ್ಥಾಪನೆ’ ಬಗ್ಗೆ ತೀವ್ರ ಕಳಕಳಿ ವ್ಯಕ್ತವಾಗಿದೆ.

15 ರಾಷ್ಟ್ರಗಳ ಕೌನ್ಸಿಲ್‌ನ ಪ್ರಸಕ್ತ ತಿಂಗಳಿನಸಭೆಅಮೆರಿಕದ ಅಧ್ಯಕ್ಷತೆಯಲ್ಲಿ ನಡೆಯಿತು. ಉಕ್ರೇನ್‌ ಕುರಿತ ಅಧ್ಯಕ್ಷೀಯಸಂಕ್ಷಿಪ್ತ ಹೇಳಿಕೆಯನ್ನು ಶುಕ್ರವಾರ ಸರ್ವಾನುಮತದಿಂದ ಅಂಗೀಕರಿಸಲಾಯಿತು. ನಂತರ ಶಾಂತಿಯುತ ಪರಿಹಾರದ ಪ್ರಯತ್ನಗಳು ಯಾವ ರೀತಿ ಅಳವಡಿಕೆಯಾಗುತ್ತಿದೆ ಎನ್ನುವ ಮಾಹಿತಿಯನ್ನುಸಕಾಲಕ್ಕೆ ನೀಡುವಂತೆಯೂ ಗುಟೆರೆಸ್‌ ಅವರಿಗೆ ಭದ್ರತಾ ಮಂಡಳಿ ಮನವಿ ಮಾಡಿತು.

ADVERTISEMENT

ಅಧ್ಯಕ್ಷೀಯ ಹೇಳಿಕೆಯಲ್ಲಿಉಕ್ರೇನ್‌ನಲ್ಲಿನ ಆಕ್ರಮಣವನ್ನು ‘ಯುದ್ಧ’ ಅಥವಾ ‘ಸಂಘರ್ಷ’ ಎಂದು ಉಲ್ಲೇಖಿಸಿಲ್ಲ.ಎಲ್ಲ ಸದಸ್ಯ ರಾಷ್ಟ್ರಗಳು ವಿಶ್ವಸಂಸ್ಥೆಯ ಚಾರ್ಟರ್ ಅಡಿಯಲ್ಲಿ, ತಮ್ಮ ಅಂತರರಾಷ್ಟ್ರೀಯ ವಿವಾದಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಲು ಒಪ್ಪಿರುವ ಬಾಧ್ಯತೆಯನ್ನು ಮಾತ್ರ ನೆನಪಿಸಲಾಗಿದೆ.

ಮಾಸ್ಕೊ ಮತ್ತು ಕೀವ್‌ಗೆ ಇತ್ತೀಚೆಗೆ ಭೇಟಿ ನೀಡಿದ್ದ ಗುಟೆರೆಸ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರೊಂದಿಗೆ ಮಾತುಕತೆ ನಡೆಸಿ, ಮಾನವೀಯ ಸಮಸ್ಯೆ ಉದ್ಭವಿಸಿರುವ ಸ್ಥಳಗಳಿಂದ ನಾಗರಿಕರನ್ನು ಸ್ಥಳಾಂತರಿಸಲು ಅನುವು ಮಾಡಿಕೊಡುವಂತೆ ಉಭಯ ನಾಯಕರ ಮನವೊಲಿಸಿದ್ದರು. ಇದರ ಪರಿಣಾಮ ಉಕ್ರೇನಿನ ಬಂದರು ನಗರ ಮರಿಯುಪೊಲ್‌ ಮತ್ತು ಅಜೋವ್‌ಸ್ಟಾಲ್‌ ಉಕ್ಕಿನ ಸ್ಥಾವರದ ಬಂಕರ್‌ಗಳಲ್ಲಿ ಸಿಲುಕಿದ್ದ ನಾಗರಿಕರನ್ನು ಮಾನವೀಯ ಕಾರಿಡಾರ್‌ಗಳ ಮೂಲಕ ಸ್ಥಳಾಂತರಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.