ADVERTISEMENT

ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಪ್ರತಿನಿಧಿಯಾಗಿ ಭಾರತದ ಗಿಲ್ ನೇಮಕ

ಪಿಟಿಐ
Published 12 ಜೂನ್ 2022, 4:33 IST
Last Updated 12 ಜೂನ್ 2022, 4:33 IST
ಅಮನ್‌ದೀಪ್‌ ಸಿಂಗ್ ಗಿಲ್‌
ಅಮನ್‌ದೀಪ್‌ ಸಿಂಗ್ ಗಿಲ್‌   

ವಿಶ್ವಸಂಸ್ಥೆ: ಭಾರತದ ಹಿರಿಯ ರಾಜತಾಂತ್ರಿಕರಾದ ಅಮನ್‌ದೀಪ್‌ ಸಿಂಗ್ ಗಿಲ್‌ ಅವರನ್ನು ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತನ್ನ ಪ್ರತಿನಿಧಿಯಾಗಿ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆ್ಯಂಟನಿ ಗುಟೆರಸ್‌ ನೇಮಕ ಮಾಡಿದ್ದಾರೆ.

ಗಿಲ್‌ ಅವರನ್ನು ‘ಡಿಜಿಟಲ್‌ ತಂತ್ರಜ್ಞಾನ ಕ್ಷೇತ್ರದ ಚಿಂತನಾಶೀಲ ನಾಯಕ’ ಎಂದುವಿಶ್ವಸಂಸ್ಥೆ ಬಣ್ಣಿಸಿದೆ. ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆಗೆ ಡಿಜಿಟಲ್ ತಂತ್ರಜ್ಞಾನದ ಸಮರ್ಥ ಬಳಕೆ ಹೇಗೆ ಉಪಯುಕ್ತ ಎಂಬ ಬಗ್ಗೆ ಅವರು ಆಳವಾದ ಜ್ಞಾನ ಹೊಂದಿದ್ದಾರೆ.

ಇವರು 2016ರಿಂದ 2018 ರವರೆಗೆ ನಿಶ್ಶಸ್ತ್ರೀಕರಣ ಕುರಿತ ಸಮ್ಮೇ ಳನಕ್ಕೆ ಭಾರತೀಯ ರಾಯಭಾರಿ ಮತ್ತು ಶಾಶ್ವತ ಪ್ರತಿನಿಧಿ ಹಾಗೂ ಅಂತರರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮತ್ತು ಕೃತಕ ಬುದ್ಧಿಮತ್ತೆ ಸಂಶೋಧನೆಗೆ ಸಿಇಒ ಆಗಿಯೂ ಕಾರ್ಯನಿರ್ವಹಿಸಿದ್ದರು.

ADVERTISEMENT

ಗಿಲ್‌ ಅವರು 1992ರಲ್ಲಿ ಭಾರತೀಯ ರಾಜತಾಂತ್ರಿಕ ಸೇವೆಗೆ ಸೇರಿದರು. ಅಂತರರಾಷ್ಟ್ರೀಯ ಭದ್ರತಾ ವ್ಯವಹಾರ ಸೇರಿದಂತೆ ವಿವಿಧ ಸ್ಥಾನಗಳನ್ನು ನಿಭಾಯಿಸಿದ್ದು, ಟೆಹರಾನ್‌ ಮತ್ತು ಕೊಲಂಬೊದಲ್ಲಿಯೂ ಕಾರ್ಯನಿರ್ವಹಿಸಿದ್ದರು. ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯದ ಸಂದರ್ಶಕ ವಿಷಯತಜ್ಞರಾಗಿ ಸೇವೆ ಸಲ್ಲಿಸಿದ್ದಾರೆ.

ಲಂಡನ್‌ನ ಕಿಂಗ್ಸ್ ಕಾಲೇಜಿನಲ್ಲಿ ಪಿಎಚ್.ಡಿ ಪದವಿ ಪಡೆದಿರುವ ಅವರು ಪದವಿ ಶಿಕ್ಷಣವನ್ನು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕಲ್‌ ಕಮ್ಯುನಿಕೇಷನ್‌ ವಿಷಯ ದಲ್ಲಿ ಪೂರ್ಣಗೊಳಿಸಿದರು.

ಜಿನೇವಾ ವಿಶ್ವವಿದ್ಯಾಲಯದಲ್ಲಿ ಫ್ರೆಂಚ್‌ ಇತಿಹಾಸ ಮತ್ತು ಭಾಷಾ ವಿಷಯದಲ್ಲಿ ಉನ್ನತ ಡಿಪ್ಲೊಮಾ ಪದವಿ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.