ಬೀಜಿಂಗ್: ಚೀನಾದ ಅತಿದೊಡ್ಡ ನಗರ ಶಾಂಘೈನಲ್ಲಿ ಶುಕ್ರವಾರ 2ನೇ ಹಂತದ ಲಾಕ್‌ಡೌನ್ ಆರಂಭವಾಗಿದ್ದು, ಈ ಹಂತದಲ್ಲಿ 1.6 ಕೋಟಿ ಮಂದಿಗೆ ಕೋವಿಡ್ ಪರೀಕ್ಷೆ ನಡೆಸುವ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ.
ಮೊದಲ ಹಂತದಲ್ಲಿ ಶಾಂಘೈನ ಪೂರ್ವ ಜಿಲ್ಲೆಗಳಲ್ಲಿ ಹೇರಲಾಗಿದ್ದ ಲಾಕ್‌ಡೌನ್ ಅನ್ನು ಶುಕ್ರವಾರ ತೆರವುಗೊಳಿಸಲಾಗಿದೆ. ಇದೀಗ ಪಶ್ಚಿಮ ಜಿಲ್ಲೆಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಒಂದು ವೇಳೆ ಪೂರ್ವ ಭಾಗದಲ್ಲಿ ಕೊರೊನಾ ಸೋಂಕಿತರು ಪತ್ತೆಯಾದಲ್ಲಿ, ಮತ್ತೆ ಲಾಕ್‌ಡೌನ್ ವಿಸ್ತರಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಶಾಂಘೈ ನಗರದಲ್ಲಿರುವ ಎಲ್ಲಾ ನಿವಾಸಿಗಳಿಗೆ ಕೋವಿಡ್ ಪರೀಕ್ಷೆ ನಡೆಸುವ ಉದ್ದೇಶದಿಂದ 2 ಹಂತಗಳ ಲಾಕ್‌ಡೌನ್ ಘೋಷಿಸಲಾಗಿದೆ.
ಮನೆಯಿಂದ ಹೊರ ಬರುವಂತಿಲ್ಲ!:ಶಾಂಘೈ ಜನರು ಕೋವಿಡ್ ಪರೀಕ್ಷೆಗೆ ಹೊರತುಪಡಿಸಿ, ಇನ್ನಿತರ ಯಾವುದೇ ಕಾರಣಕ್ಕೂ ತಮ್ಮ ಮನೆಗಳಿಂದ ಹೊರಬರುವಂತಿಲ್ಲ. ಜನರು ತಮ್ಮ ಅಕ್ಕಪಕ್ಕದ ಮನೆಗಳಿಗೂ ಹೋಗದಂತೆ ಮನೆಯ ಗೇಟುಗಳಿಗೆ ಬೀಗ ಜಡಿಯಲಾಗಿದೆ. ಇನ್ನು ಜನರಿಗೆ ಅಗತ್ಯವಿರುವ ದಿನಸಿ ಮತ್ತು ಆಹಾರ ಪದಾರ್ಥಗಳನ್ನು ಪೂರೈಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುರುವಾರ ಒಟ್ಟು 1,787 ಮಂದಿಗೆ ಕೋವಿಡ್ ದೃಢಪಟ್ಟಿದ್ದು, ಈ ಪೈಕಿ ಶಾಂಘೈ ಒಂದರಲ್ಲೇ 358 ಪ್ರಕರಣಗಳು ಪತ್ತೆಯಾಗಿವೆ ಎಂದು ಚೀನಾದ ಆರೋಗ್ಯ ಆಯೋಗ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.