ಜೋ ಬೈಡನ್– ಡೊನಾಲ್ಡ್ ಟ್ರಂಪ್
ಪಿಟಿಐ ಚಿತ್ರ
ವಾಷಿಂಗ್ಟನ್: ‘2020ರ ಅಧ್ಯಕ್ಷೀಯ ಚುನಾವಣೆಗೆ ಹೋಲಿಸಿದರೆ 2024ರಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರನ್ನು ಬೆಂಬಲಿಸುವ ಭಾರತ ಮೂಲದ ಅಮೆರಿಕನ್ನರ ಸಂಖ್ಯೆಯಲ್ಲಿ ಶೇ 19ರಷ್ಟು ಕುಸಿತ ಆಗಿದೆ’ ಎಂಬ ಸಂಗತಿ ಏಷ್ಯನ್–ಅಮೆರಿಕ (ಎಎವಿಎಸ್) ಮತದಾನದ ದೈವಾರ್ಷಿಕ ಸಮೀಕ್ಷೆಯಲ್ಲಿ ಕಂಡುಬಂದಿದೆ. ಏಷ್ಯನ್–ಅಮೆರಿಕದ ಮತದಾರರನ್ನು ಒಳಗೊಂಡು ನಡೆಸಿದ ದೀರ್ಘಕಾಲದ ಸಮೀಕ್ಷೆ ಇದಾಗಿದೆ.
ಏಷ್ಯನ್ ಹಾಗೂ ಪೆಸಿಫಿಕ್ ಐಸ್‌ಲ್ಯಾಂಡರ್ ಅಮೆರಿಕನ್ ವೋಟ್ (ಎಪಿಐಎವೋಟ್) ಏಷ್ಯನ್–ಅಮೆರಿಕನ್ ಅಡ್ವಾನ್ಸಿಂಗ್ ಜಸ್ಟೀಸ್ (ಎಎಜೆಸಿ) ನಡೆಸಿದ ಸಮೀಕ್ಷೆ ಪ್ರಕಾರ, 2020ರಲ್ಲಿ ಈ ವರ್ಗದವರಲ್ಲಿ ಶೇಕಡ 65ರಷ್ಟು ಮಂದಿ ಬೈಡನ್ ಅವರನ್ನು ಬೆಂಬಲಿಸಿದ್ದರು. ಈಗ ಆ ಪ್ರಮಾಣವು ಶೇ 46ಕ್ಕೆ ಇಳಿಕೆಯಾಗಿದೆ.
ಅಧ್ಯಕ್ಷ ಜೋ ಬೈಡನ್ ಹಾಗೂ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನಡುವೆ ಜೂನ್ 27ರಂದು ನಡೆದ ಅಧ್ಯಕ್ಷೀಯ ಚರ್ಚೆಗೂ ಮುನ್ನ ಈ ಸಮೀಕ್ಷೆ ನಡೆಸಲಾಗಿತ್ತು.
ಕಳೆದ ಎರಡು ದಶಕಗಳಲ್ಲಿ ಅಮೆರಿಕದಲ್ಲಿ ಮತದಾನದ ಹಕ್ಕು ಪಡೆದವರಲ್ಲಿ ಏಷ್ಯನ್–ಅಮೆರಿಕನ್ನರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. 2016ಕ್ಕೆ ಹೋಲಿಸಿದರೆ ಮತದಾರರ ಸಂಖ್ಯೆಯಲ್ಲಿ ಶೇಕಡ 15ರಷ್ಟು ಏರಿಕೆಯಾಗಿದೆ. 2020ರಲ್ಲಿ ಮೊದಲ ಬಾರಿ ಮತ ಚಲಾಯಿಸಿದವರು ಗೆಲುವಿನ ನಿರ್ಣಯದಲ್ಲಿ ಪ್ರಮುಖ ವಹಿಸಿದ್ದ ರಾಜ್ಯಗಳಲ್ಲಿ ಬೈಡನ್ ಭಾರಿ ಮುನ್ನಡೆ ಕಾಯ್ದುಕೊಂಡಿದ್ದರು. ಈ ರಾಜ್ಯಗಳಲ್ಲಿಯೇ ಈ ಸಲ ಬೈಡನ್ ಬೆಂಬಲಿಸುವವರ ಪ್ರಮಾಣದಲ್ಲಿ ಕುಸಿತವಾಗಿದೆ.
ಕಮಲಾ ಪರ ಅಚಲ ನಿಲುವು: ಅಮೆರಿಕದ ಮೊದಲ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಪರ ಏಷ್ಯನ್–ಅಮೆರಿಕನ್ನರು ಶೇ 54ರಷ್ಟು ಒಲವು ಹೊಂದಿದ್ದು, ಶೇ 38ರಷ್ಟು ಮಂದಿ ಮರು ಆಯ್ಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.