ADVERTISEMENT

ಶೆಹಬಾಜ್‌ ಷರೀಫ್‌ ಪಾಕಿಸ್ತಾನದ ಹೊಸ ಪ್ರಧಾನಿ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಏಪ್ರಿಲ್ 2022, 4:40 IST
Last Updated 10 ಏಪ್ರಿಲ್ 2022, 4:40 IST
 ಶೆಹಬಾಜ್ ಷರೀಫ್
ಶೆಹಬಾಜ್ ಷರೀಫ್    

ಇಸ್ಲಾಮಾಬಾದ್‌: ಹೆಚ್ಚು ಕಡಿಮೆ ಮೂರೂವರೆ ವರ್ಷ ಪಾಕಿಸ್ತಾನದ ಪ್ರಧಾನ ಮಂತ್ರಿಯಾಗಿದ್ದ ಮಾಜಿ ಕ್ರಿಕೆಟರ್‌ ಇಮ್ರಾನ್‌ ಖಾನ್‌ ಶನಿವಾರ ರಾತ್ರಿ ವಿರೋಧ ಪಕ್ಷಗಳ ಅವಿಶ್ವಾಸ ನಿರ್ಣಯ ಮಂಡನೆಯಲ್ಲಿ ಸೋತು ಪದಚ್ಯುತಗೊಂಡರು.

342 ಸದಸ್ಯ ಬಲದ ಸಂಸತ್‌ನಲ್ಲಿ ಅವಿಶ್ವಾಸ ನಿರ್ಣಯದ ಪರವಾಗಿ 174 ಮತಗಳು ಚಲಾವಣೆಗೊಂಡವು. ಇದರೊಂದಿಗೆ ಇಮ್ರಾನ್‌ ಪ್ರಧಾನಿ ಸ್ಥಾನದಿಂದ ಕೆಳಗಿಳಿಯಬೇಕಾಯಿತು.

ADVERTISEMENT

ಪಾಕಿಸ್ತಾನದ ಸಂಸತ್ತು 'ನ್ಯಾಷನಲ್‌ ಅಸೆಂಬ್ಲಿ'ಯಲ್ಲಿ ಸೋಮವಾರ ಹೊಸ ಪ್ರಧಾನಿಯ ಆಯ್ಕೆ ನಡೆಯಲಿದೆ. ಸೋಮವಾರ ಪಾಕಿಸ್ತಾನ ಸಂಸತ್ತು ಹೊಸದಾಗಿ ಸಮಾವೇಶಗೊಳ್ಳಲಿದ್ದು, ಪ್ರತಿಪಕ್ಷ ನಾಯಕ ಶೆಹಬಾಜ್ ಷರೀಫ್ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾಗುವ ಸಾಧ್ಯತೆಯಿದೆ.

ಶೆಯಬಾಜ್‌ ಷರೀಫ್‌ ಪಾಕಿಸ್ತಾನದಿಂದ ಹೊರಗೆ, ಬೇರೆ ದೇಶಗಳಿಗೆ ಅಷ್ಟಾಗಿ ಗೊತ್ತಿಲ್ಲವಾದರೂ, ಪಾಕ್‌ ಮಟ್ಟಿಗೆ ದಕ್ಷ ಆಡಳಿತಗಾರನಾಗಿ ಹೆಸರುವಾಸಿ. ಮೂರು ಬಾರಿ ಪ್ರಧಾನಿಯಾಗಿದ್ದ ನವಾಜ್ ಷರೀಫ್ ಅವರ ತಮ್ಮನಾದ ಶೆಹಬಾಜ್, ಇಮ್ರಾನ್ ವಿರುದ್ಧದ ಅವಿಶ್ವಾಸ ನಿರ್ಣಯ ಮಂಡನೆಯ ಐತಿಹಾಸಿಕ ಘಟನೆಯಲ್ಲಿ ವಿರೋಧಪಕ್ಷಗಳನ್ನು ಮುನ್ನಡೆಸಿದರು.

ವಿರೋಧ ಪಕ್ಷಗಳು ಈಗಾಗಲೇ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಅಧ್ಯಕ್ಷ ಶೆಹಬಾಜ್ ಷರೀಫ್ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿವೆ.

'ಹೊಸ ಸರ್ಕಾರ ದ್ವೇಷದ ರಾಜಕೀಯ ಮಾಡುವುದಿಲ್ಲ' ಎಂದು ಶೆಹಬಾಜ್ ಹೇಳಿದ್ದಾರೆ.

'ನಾನು ಹಿಂದಿನ ಕಹಿ ಮರೆತು ಮುನ್ನಡೆಯಲು ಬಯಸುತ್ತೇನೆ. ನಾನು ಸೇಡು ತೀರಿಸಿಕೊಳ್ಳುವುದಿಲ್ಲ, ಅನ್ಯಾಯ ಮಾಡುವುದಿಲ್ಲ. ನಾನು ಯಾವುದೇ ಕಾರಣಕ್ಕೂ ಜನರನ್ನು ಜೈಲಿಗೆ ಕಳುಹಿಸುವುದಿಲ್ಲ, ಕಾನೂನು ಮತ್ತು ನ್ಯಾಯಾಂಗ ಆ ಕೆಲಸ ಮಾಡುತ್ತದೆ' ಎಂದು ಶೆಹಬಾಜ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.