ADVERTISEMENT

ಮಕ್ಕಳಿಗೆ ಕೋವಿಡ್ ಲಸಿಕೆ ನೀಡಬೇಕೇ? ಪಾಲಕರು ಒಪ್ಪದಿದ್ದರೆ ಏನಾಗುತ್ತದೆ?

ಪಿಟಿಐ
Published 10 ಜನವರಿ 2022, 9:29 IST
Last Updated 10 ಜನವರಿ 2022, 9:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸಿಡ್ನಿ: ಜಗತ್ತಿನಾದ್ಯಂತ ಕೊರೊನಾ ವೈರಸ್‌ನ ರೂಪಾಂತರ ತಳಿ ಓಮೈಕ್ರಾನ್ ವೇಗವಾಗಿ ಹರಡುತ್ತಿರುವ ಬೆನ್ನಲ್ಲೇ ಹಲವು ದೇಶಗಳಲ್ಲಿ ಮಕ್ಕಳಿಗೂ ಲಸಿಕೆ ನೀಡಿಕೆ ಆರಂಭವಾಗಿದೆ. ಆಸ್ಟ್ರೇಲಿಯಾದಲ್ಲಿ 5ರಿಂದ 11 ವರ್ಷ ವಯಸ್ಸಿನ ಮಕ್ಕಳಿಗೂ ಲಸಿಕೆ ನೀಡಲು ಅನುಮೋದನೆ ದೊರೆತಿದೆ. ಆದರೆ ಸಣ್ಣ ಮಕ್ಕಳಿಗೆ ಲಸಿಕೆ ನೀಡುವ ವಿಚಾರದಲ್ಲಿ ಅಲ್ಲಿನ ಪಾಲಕರಲ್ಲಿ ಮಿಶ್ರ ಅಭಿಪ್ರಾಯ ಇರುವುದು ಲಸಿಕಾ ಅಭಿಯಾನಕ್ಕೆ ತೊಂದರೆ ಉಂಟು ಮಾಡಿದೆ ಎಂದು ಮೂಲಗಳು ಹೇಳಿವೆ.

ಕೋವಿಡ್ ಸಾಂಕ್ರಾಮಿಕ ಆರಂಭಕ್ಕೂ ಮುನ್ನ ಮಕ್ಕಳಿಗೆ ಲಸಿಕೆ ನೀಡುವ ವಿಚಾರದಲ್ಲಿ ಆಸ್ಟ್ರೇಲಿಯಾದ ಪಾಲಕರು ಬೇರೆಯೇ ನಿಲುವು ಹೊಂದಿದ್ದರು. ಸಾಮಾಜಿಕ ಜವಾಬ್ದಾರಿ, ಲಸಿಕೆ ನೀಡದಿದ್ದರೆ ವೇತನವಿಲ್ಲ ಎಂಬಂಥ ಸರ್ಕಾರದ ನಿಯಮಗಳು ಮಕ್ಕಳಿಗೆ ಲಸಿಕೆ ನೀಡುವಂತೆ ಅವರನ್ನು ಪ್ರೇರೇಪಿಸುತ್ತಿದ್ದವು. ಆದರೆ ಕೋವಿಡ್ ಲಸಿಕೆ ವಿಚಾರದಲ್ಲಿ ಅವರು ಬೇರೆಯದೇ ರೀತಿ ಯೋಚನೆ ಮಾಡುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಮಕ್ಕಳಲ್ಲಿರುವ ಕಾಯಿಲೆಗಳು, ಬಾಲ್ಯದ ಸಮಸ್ಯೆಗಳ ಕಾರಣಕ್ಕಾಗಿ ಅನೇಕ ಪಾಲಕರು ಮಕ್ಕಳಿಗೆ ಲಸಿಕೆ ಕೊಡಿಸಲು ಹಿಂದೇಟು ಹಾಕಿದರೆ, ಇನ್ನೊಂದಷ್ಟು ಮಂದಿ ಪಾಲಕರು ಹಿಂಜರಿಯಲು ಲಸಿಕೆಯ ಅಡ್ಡ ಪರಿಣಾಮಗಳು ಕಾರಣವಾಗಿವೆ. ಕೆಲವೆಡೆ ಗ್ರಾಮೀಣ ಪ್ರದೇಶಗಳಲ್ಲಿ ಲಸಿಕಾ ಕೇಂದ್ರಕ್ಕೆ ತೆರಳುವುದಕ್ಕೆ ಇರುವ ಸಾರಿಗೆ ವ್ಯವಸ್ಥೆಯ ಅಡಚಣೆಯೂ ಪಾಲಕರು ಹಿಂದೇಟು ಹಾಕಲು ಕಾರಣವಾಗಿದೆ.

16 ವರ್ಷ ಮೇಲ್ಪಟ್ಟವರಾದರೆ ಲಸಿಕೆ ಪಡೆಯಬೇಕೇ ಅಥವಾ ಬೇಡವೇ ಎಂಬ ನಿರ್ಧಾರವನ್ನು ಅವರೇ ಕೈಗೊಳ್ಳುತ್ತಿದ್ದಾರೆ. ಆದರೆ ಚಿಕ್ಕ ಮಕ್ಕಳ ವಿಚಾರದಲ್ಲಿ ಸಮಸ್ಯೆಯಾಗಿದೆ ಎಂದು ಸಿಡ್ನಿ ವಿಶ್ವವಿದ್ಯಾಲಯದ ಅಸೋಸಿಯೇಟ್ ಪ್ರೊಫೆಸರ್ ನಿಕೋಲಸ್ ವುಡ್ ತಿಳಿಸಿದ್ದಾರೆ.

ಸದ್ಯ ಇಂಥ ಸಮಸ್ಯೆಗಳನ್ನು ಬಗೆಹರಿಸಲೆಂದು ಆಸ್ಟ್ರೇಲಿಯಾದ ಕೌಟುಂಬಿಕ ನ್ಯಾಯಾಲಯ ಪ್ರತ್ಯೇಕ ವಿಭಾಗವನ್ನು ತೆರೆದಿದೆ. ಮಕ್ಕಳಿಗೆ ಲಸಿಕೆ ನೀಡಿಕೆ ಸಂಬಂಧಿಸಿದ ಸುಮಾರು ಅರ್ಜಿಗಳು ಸದ್ಯ ನ್ಯಾಯಾಲಯದ ಮುಂದಿವೆ. ಅವುಗಳು ಸಮಸ್ಯೆಗಳನ್ನು ಹೇಗೆ ಬಗೆಹರಿಸಬಲ್ಲವು ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಆದಾಗಿಯೂ ನ್ಯಾಯಾಲಯಗಳು ಕೂಡ ಲಸಿಕೆ ನೀಡಿಕೆ ಪರವಾಗಿಯೇ ತೀರ್ಪುಗಳನ್ನು ನೀಡುವ ಸಾಧ್ಯತೆ ಇದೆ ಎಂದು ವುಡ್ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.