ADVERTISEMENT

ಸಿಡ್ನಿ: ಸಿಖ್ಖರ ಮೇಲೆ ಭಾರತೀಯರಿಂದಲೇ ದಾಳಿ

ನೂತನ ಕೃಷಿ ಕಾಯ್ದೆ ಕುರಿತಂತೆ ಭಿನ್ನಾಭಿಪ್ರಾಯ

ಪಿಟಿಐ
Published 4 ಮಾರ್ಚ್ 2021, 15:35 IST
Last Updated 4 ಮಾರ್ಚ್ 2021, 15:35 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮೆಲ್ಬರ್ನ್: ಭಾರತದಲ್ಲಿನ ನೂತನ ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದಂತೆ ಆಸ್ಟ್ರೇಲಿಯಾದಲ್ಲಿರುವ ಭಾರತೀಯರ ನಡುವೆ ಸಂಘರ್ಷ ಆರಂಭಗೊಂಡಿದ್ದು, ಸಿಖ್ಖರ ಗುಂಪೊಂದರ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

‘ಸಿಡ್ನಿಯ ಹ್ಯಾರಿಸ್‌ ಪಾರ್ಕ್‌ನಲ್ಲಿ ಅಪರಿಚಿತರ ಗುಂಪೊಂದು ಸುತ್ತಿಗೆ, ಬೇಸ್‌ಬಾಲ್‌ ಬ್ಯಾಟ್‌ ಹಾಗೂ ಬಡಿಗೆಗಳಿಂದ ನಮ್ಮ ಕಾರಿನ ಮೇಲೆ ದಾಳಿ ನಡೆಸಿತು’ ಎಂದು ದಾಳಿಗೆ ಒಳಗಾದ ವ್ಯಕ್ತಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ‘7ನ್ಯೂಸ್‌’ ಎಂಬ ಸುದ್ದಿವಾಹಿನಿ ವರದಿ ಮಾಡಿದೆ.

‘ಎಲ್ಲ ಕಡೆಗಳಿಂದಲೂ ನಮ್ಮ ಕಾರನ್ನು ಸುತ್ತುವರಿದ ದಾಳಿಕೋರರು, ಕಾರಿನ ಗಾಜುಗಳನ್ನು ಒಡೆದು ಹಾಕಿದರು. ಆ ಗುಂಪು ನಮ್ಮ ಪೈಕಿ ಒಬ್ಬರನ್ನಾದರೂ ಹತ್ಯೆ ಮಾಡುವ ಸಾಧ್ಯತೆ ಇತ್ತು.ತಪ್ಪಿಸಿಕೊಂಡು ಓಡಿದರೂ, ಗುಂಪು ನಮ್ಮನ್ನು ಬೆನ್ನಟ್ಟಿ ಹಲ್ಲೆ ನಡೆಸಿತು’ ಎಂದು ದಾಳಿಗೊಳಗಾದ ಮತ್ತೊಬ್ಬ ವ್ಯಕ್ತಿ ಹೇಳಿದ್ದಾಗಿ ಸುದ್ದಿವಾಹಿನಿ ವರದಿ ಮಾಡಿದೆ.

ADVERTISEMENT

‘ಈ ವಿಷಯವನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ. ದಾಳಿ ಮಾಡಿದವರನ್ನು ಗಡಿಪಾರು ಮಾಡುವ ಸಾಧ್ಯತೆ ಬಗ್ಗೆಯೂ ಪೊಲೀಸರು ಚಿಂತನೆ ನಡೆಸಿದ್ದಾರೆ’ ಎಂದೂ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.