ADVERTISEMENT

ಅಮೆರಿಕ: ಪಾಕ್‌ ರಾಯಭಾರಿ ಕಚೇರಿ ಎದುರು ಸಿಂಧಿ ಸಮುದಾಯದ ಪ್ರತಿಭಟನೆ

ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದಲ್ಲಿ ಸಿಂಧಿ ಜನರ ಅಪಹರಣಕ್ಕೆ ಖಂಡನೆ

ಪಿಟಿಐ
Published 16 ಆಗಸ್ಟ್ 2020, 6:22 IST
Last Updated 16 ಆಗಸ್ಟ್ 2020, 6:22 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌: ಪಾಕಿಸ್ತಾನದಲ್ಲಿ ಸಮುದಾಯದವರ ಮೇಲೆ ದೌರ್ಜನ್ಯ, ಅಪಹರಣ ಪ್ರಕರಣಗಳು ಹೆಚ್ಚುತ್ತಿವೆ ಎಂದು ಆರೋಪಿಸಿ ಸಿಂಧಿ ಸಮುದಾಯದವರು ಇಲ್ಲಿರುವ ಪಾಕಿಸ್ತಾನದ ರಾಯಭಾರಿ ಕಚೇರಿ ಎದುರು ಪ್ರತಿಭಟಿಸಿದರು.

‘ಸಂತ್ರಸ್ತರಾಗಿರುವ ಕುಟುಂಬದವರೊಂದಿಗೆ ನಾವಿದ್ದೇವೆ’ ಎಂಬ ಫಲಕಗಳನ್ನು ಹಿಡಿದಿದ್ದ ಪ್ರತಿಭಟನಕಾರರು, ಅಪಹರಿಸಿದವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಶಿಕ್ಷಕ ಹಾಗೂ ವಿದ್ವಾಂಸರಾದ ಸಾರಂಗ್‌ ಜೊಯೊ ಅವರನ್ನು ಕರಾಚಿಯಲ್ಲಿರುವ ಅವರ ನಿವಾಸದಿಂದ ಅಪಹರಣ ಮಾಡಲಾಗಿದೆ. ಅವರನ್ನೂ ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ADVERTISEMENT

‘ಸಮುದಾಯದವರ ಅಪಹರಣದ ವಿರುದ್ಧ ದನಿ ಎತ್ತಿರುವ ಸಹೋದರಿಯರಾದ ಅಕ್ಸಾ ದಯೊ, ಶಾಜಿಯಾ ಚಾಂಡಿಯೊ, ಶಬಾನಾ ಜುನೆಜೊ, ಸೋಹ್ನಿ ಜೊಯೊ, ಸಿಂಧು ಜೊಯೊ, ಸೋರಥ್ ಲೋಹಾರ್‌ ಹಾಗೂ ಸಾಸೂಯಿ ಲೋಹಾರ್‌ ಅವರ ದಿಟ್ಟ ಹೋರಾಟ ನಮಗೆಲ್ಲ ಸ್ಫೂರ್ತಿ’ ಎಂದು ಸಿಂಧಿ ಫೌಂಡೇಷನ್‌ನ ಕಾರ್ಯಕಾರಿ ನಿರ್ದೇಶಕ ಸೂಫಿ ಲಘಾರಿ ಹೇಳಿದರು.

ಸಿಂಧಿ ಜನಾಂಗದವರಲ್ಲದೇ, ಬಲೂಚ್‌, ಪಖ್ತೂನ್‌ ಜನಾಂಗದವರು ಹಾಗೂ ಗಿಲ್ಗಿಟ್‌–ಬಾಲ್ಟಿಸ್ತಾನ್‌ ಮೂಲದ ಜನರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.