ಸಿಂಗಪುರ: ನಾವು ಭಯೋತ್ಪಾದಕ ಕೃತ್ಯಗಳನ್ನು ತೀವ್ರವಾಗಿ ಖಂಡಿಸುತ್ತೇವೆ, ಅದರ ವಿರುದ್ಧದ ಹೋರಾಟದಲ್ಲಿ ಭಾರತದ ಪರವಾಗಿದ್ದೇವೆ ಎಂದು ಸಿಂಗಪುರವು ಬೆಂಬಲ ಸೂಚಿಸಿದೆ.
ಮಂಗಳವಾರ 'ಆಪರೇಷನ್ ಸಿಂಧೂರ' ಕುರಿತು ಮಾಹಿತಿ ನೀಡಲು ತೆರಳಿರುವ ಜೆಡಿ(ಯು) ರಾಜ್ಯ ಸಭಾ ಸದಸ್ಯ ಸಂಜಯ್ ಕುಮಾರ್ ಝಾ ನೇತೃತ್ವದ 'ಸರ್ವಪಕ್ಷ ಸಂಸದೀಯ ನಿಯೋಗ'ದ ಭೇಟಿಯ ನಂತರ ಅಲ್ಲಿನ ವಿದೇಶಾಂಗ ಸಚಿವೆ ಸಿಮ್ ಆನ್ ಅವರು ಭಾರತಕ್ಕೆ ಬೆಂಬಲ ಸೂಚಿಸಿದ್ದಾರೆ.
ಉಗ್ರವಾದದ ವಿರುದ್ಧ ಭಾರತ ತೆಗೆದುಕೊಳ್ಳುತ್ತಿರುವ ಕ್ರಮಗಳು ಹಾಗೂ ನಿಲುವುಗಳ ಕುರಿತು ಅವರೊಂದಿಗೆ ನಿಯೋಗವು ಚರ್ಚಿಸಿದೆ.
ಭಾರತ ಹಾಗೂ ಸಿಂಗಪುರಗಳು ಮಿತ್ರ ರಾಷ್ಟ್ರಗಳಾಗಿದ್ದು, ಭಯೋತ್ಪಾದನೆಯಂತಹ ಜಾಗತಿಕ ಸಮಸ್ಯೆಗಳ ವಿರುದ್ಧದ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಸೂಚಿಸುತ್ತೇವೆ.
ಮುಂದಿನ ದಿನಗಳಲ್ಲಿ ನಮ್ಮ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ವೃದ್ಧಿಸಿಕೊಳ್ಳಲಾಗುತ್ತದೆ ಎಂದು ವಿದೇಶಾಂಗ ಸಚಿವೆ ಸಿಮ್ ಆನ್ ಹೇಳಿದ್ದಾರೆ.
ಭಾರತೀಯ ನಿಯೋಗವು ಸಿಂಗಪುರ ಸರ್ಕಾರ ಹಾಗೂ ಅಲ್ಲಿನ ಮಾಧ್ಯಮಗಳಿಗೆ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕಾರವಾಗಿ 'ಆಪರೇಷನ್ ಸಿಂಧೂರ' ನಡೆಸಿದ್ದು, ಅದು ಕೇವಲ ಉಗ್ರರ ಮೇಲಿನ ದಾಳಿ ಅಷ್ಟೇ ಎನ್ನುವುದನ್ನು ಮನವರಿಕೆ ಮಾಡಿಕೊಡಲು ಯಶಸ್ವಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.