ADVERTISEMENT

ತಾಲಿಬಾನಿಗಳೊಂದಿಗೆ ಸಂಘರ್ಷ ತಪ್ಪಿಸಲು ಸ್ಥಳಾಂತರ ಪ್ರಕ್ರಿಯೆ ನಿಧಾನ: ನ್ಯಾಟೊ

ರಾಯಿಟರ್ಸ್
Published 21 ಆಗಸ್ಟ್ 2021, 7:46 IST
Last Updated 21 ಆಗಸ್ಟ್ 2021, 7:46 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕಾಬೂಲ್‌: ತಾಲಿಬಾನಿಗಳು ಭಾನುವಾರ ಕಾಬೂಲ್ ಪ್ರವೇಶಿಸಿದ ನಂತರದಿಂದ ಇಲ್ಲಿವರೆಗೆ ಅಫ್ಗಾನಿಸ್ತಾನದ ರಾಯಭಾರ ಕಚೇರಿಗಳು, ವಿವಿಧ ಅಂತರರಾಷ್ಟ್ರೀಯ ಯೋಜನೆಗಳ ಗುಂಪುಗಳಲ್ಲಿ ಕೆಲಸ ಮಾಡುತ್ತಿದ್ದ 12 ಸಾವಿರ ವಿದೇಶಿಗರು ಮತ್ತು ಅಫ್ಗನ್‌ ನಾಗರಿಕರನ್ನು ಸ್ಥಳಾಂತರಿಸಲಾಗಿದೆ ಎಂದು ನ್ಯಾಟೊ ಅಧಿಕಾರಿ ತಿಳಿಸಿದ್ದಾರೆ.

‘ಸದ್ಯ ಅಫ್ಗಾನಿಸ್ತಾನದಲ್ಲಿ ಪರಿಸ್ಥಿತಿ ಅಪಾಯದಲ್ಲಿದೆ. ನಾವು ಯಾವುದೇ ಕಾರಣಕ್ಕೂ ವಿಮಾನ ನಿಲ್ದಾಣದ ಹೊರಗೆ ತಾಲಿಬಾನ್ ಸದಸ್ಯರು ಅಥವಾ ನಾಗರಿಕರೊಂದಿಗೆ ಘರ್ಷಣೆ ನಡೆಯುವುದನ್ನು ಬಯಸುವುದಿಲ್ಲ. ಈ ಸಂಘರ್ಷವನ್ನು ತಪ್ಪಿಸುವುದಕ್ಕಾಗಿ ಸ್ಥಳಾಂತರಿಸುವ ಪ್ರಕ್ರಿಯೆ ನಿಧಾನಗೊಳಿಸಿದ್ದೇವೆ‘ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

‌ತಾಲಿಬಾನಿ ಬಂಡುಕೋರರ ಉಪಟಳದಿಂದ ರಾಜಧಾನಿ ಕಾಬೂಲ್‌ನಲ್ಲಿ ವ್ಯವಸ್ಥೆ ಅಸ್ತವ್ಯಸ್ತಗೊಂಡಿರುವ ನಡುವೆ ಪಾಶ್ಚಿಮಾತ್ಯ ರಾಷ್ಟ್ರಗಳು ತಮ್ಮ ದೇಶದ ಜನರನ್ನು ಸ್ಥಳಾಂತರಿಸಲು ಹರಸಾಸಪಡುತ್ತಿವೆ.

ADVERTISEMENT

ಇದೇ ವೇಳೆ, ವಿಮಾನ ನಿಲ್ದಾಣದಲ್ಲಿ ಉಂಟಾಗುತ್ತಿರುವ ಸಮಸ್ಯೆ ಸರಿಪಡಿಸುವ ಜವಾಬ್ದಾರಿ ತೆಗೆದುಕೊಳ್ಳಲು ತಾಲಿಬಾನ್ ನಿರಾಕರಿಸಿದೆ. ಸಾವಿರಾರು ಜನರು ಸ್ಥಳಾಂತರಗೊಳ್ಳಲು ಹತಾಶರಾಗಿರುವ ಈ ಸಂದರ್ಭದಲ್ಲಿ, ಪಾಶ್ಚಿಮಾತ್ಯ ರಾಷ್ಟ್ರಗಳು, ಜನರ ಸ್ಥಳಾಂತರಕ್ಕೆ ಇನ್ನೂ ಉತ್ತಮ ಯೋಜನೆ ರೂಪಿಸಬಹುದು ಎಂದು ತಾಲಿಬಾನಿಗಳು ಹೇಳುತ್ತಿದ್ದಾರೆ.

ಕಳೆದ ಭಾನುವಾರದಿಂದ ವಿಮಾನ ನಿಲ್ದಾಣ ಮತ್ತು ಸುತ್ತಮುತ್ತ ತಾಲಿಬಾನಿಗಳು ನಡೆಸಿದ ಗುಂಡಿನ ದಾಳಿಗೆ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ ಎಂದು ನ್ಯಾಟೋ ಮತ್ತು ತಾಲಿಬಾನ್ ಅಧಿಕಾರಿಗಳು ಹೇಳಿದ್ದಾರೆ.

ಕಾಬೂಲ್ ವಿಮಾನ ನಿಲ್ದಾಣವನ್ನು ಸುತ್ತುವರಿದಿರುವ ಸಶಸ್ತ್ರ ತಾಲಿಬಾನಿಗಳು, ಹೊರ ದೇಶಕ್ಕೆ ಪ್ರಯಾಣಿಸಲು ಬೇಕಾದ ದಾಖಲೆಗಳಿಲ್ಲದ ಜನರನ್ನು ವಿಮಾನ ನಿಲ್ದಾಣದಿಂದ ವಾಪಸ್ ಕಳುಹಿಸುತ್ತಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.