ADVERTISEMENT

ಕೆನಡಾ ಕಾಳ್ಗಿಚ್ಚು: ದೆಹಲಿ ಮಾಲಿನ್ಯವನ್ನು ಮೀರಿಸಿದ ನ್ಯೂಯಾರ್ಕ್‌

ಪಿಟಿಐ
Published 8 ಜೂನ್ 2023, 5:51 IST
Last Updated 8 ಜೂನ್ 2023, 5:51 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಅಮೆರಿಕ: ಕೆನಡಾದಲ್ಲಿ ಸಂಭವಿಸಿರುವ ಕಾಳ್ಗಿಚ್ಚಿನ ಹೊಗೆಯು ಅಮೆರಿಕದ ಪೂರ್ವ ಕರಾವಳಿ ಮತ್ತು ಮಧ್ಯಪಶ್ಚಿಮಕ್ಕೆ ಹರಡುತ್ತಿರುವುದರಿಂದ ನ್ಯೂಯಾರ್ಕ್‌ ನಗರದ ಗಾಳಿಯ ಗುಣಮಟ್ಟವು ಹದಗೆಟ್ಟಿದೆ. ಮೆಟ್ರೋಪಾಲಿಟನ್‌ ನಗರದಲ್ಲಿನ ಮಾಲಿನ್ಯ ಮಟ್ಟವು ಪ್ರಪಂಚದಾದ್ಯಂತ ಪ್ರಮುಖ ನಗರಗಳಲ್ಲಿನ ಮಾಲಿನ್ಯ ಮಟ್ಟಕ್ಕಿಂತ ಅಧಿಕವಾಗಿದ್ದು, ದೆಹಲಿಯನ್ನು ಮೀರಿಸಿದೆ.

ಕೆನಡಾದ ಕಾಳ್ಗಿಚ್ಚಿನಿಂದ ಈ ಪ್ರದೇಶಕ್ಕೆ ಬರುತ್ತಿರುವ ಹೊಗೆಯ ಮಬ್ಬಾದ ಮುಸುಕಿನಿಂದ ನ್ಯೂಯಾರ್ಕ್‌ ನಗರದ ಸುಂದರವಾದ ಮತ್ತು ಹೆಸರಾಂತ ಸ್ಕೈಲೈನ್‌ ಬುಧವಾರ ಅಗೋಚರವಾಗಿತ್ತು.

ವಾಯು ಗುಣಮಟ್ಟ ಸೂಚ್ಯಂಕದ ‍ಪ್ರಕಾರ, ಬುಧವಾರ ಬೆಳಿಗ್ಗೆ ನ್ಯೂಯಾರ್ಕ್‌ ನಗರವು ವಿಶ್ವದಾದ್ಯಂತ ಪ್ರಮುಖ ನಗರಗಳಲ್ಲಿ ಅತ್ಯಧಿಕ ಮಟ್ಟದ ವಾಯುಮಾಲಿನ್ಯವನ್ನು ಹೊಂದಿದ್ದು, ದೆಹಲಿಯನ್ನು ಮೀರಿಸಿದೆ.

ADVERTISEMENT

ಇತ್ತೀಚೆಗೆ ಜಾಗತಿಕ ವಾಯು ಗುಣಮಟ್ಟದ ವರದಿ ಪಟ್ಟಿಯಲ್ಲಿ, ಭಾರತವು ಎಂಟನೇ ಸ್ಥಾನದಲ್ಲಿದ್ದರೆ, ಚಾಡ್‌, ಇರಾಕ್‌, ಪಾಕಿಸ್ತಾನ, ಬಹ್ರೇನ್‌ ಮತ್ತು ಬಾಂಗ್ಲಾದೇಶಗಳು 2022 ರಲ್ಲಿ ಹೆಚ್ಚು ಮಾಲಿನ್ಯಗೊಂಡ ಐದು ದೇಶಗಳಾಗಿವೆ.

ಬುಧವಾರ ಬೆಳಿಗ್ಗೆ ನಗರದಲ್ಲಿನ ಗಾಳಿಯ ಗುಣಮಟ್ಟವು ಅನಾರೋಗ್ಯಕರ ಎಂದು ಪಟ್ಟಿ ಮಾಡಲಾಗಿದ್ದು, ವಾರದ ಉಳಿದ ದಿನಗಳಲ್ಲಿ ನ್ಯೂಯಾರ್ಕ್‌ನಲ್ಲಿ ಮಬ್ಬುಮಬ್ಬಾದ ಹವಾಮಾನ ಮುಂದುವರಿಯುತ್ತದೆ ಎಂದು ಹವಾಮಾನ ಮುನ್ಸೂಚಕರು ನಿರೀಕ್ಷಿಸಿದ್ದಾರೆ.

ನಗರದಲ್ಲಿ ಹೊಗೆ ಮತ್ತು ಮಬ್ಬಿನಿಂದಾಗಿ ಕಡಿಮೆ ಗೋಚರತೆಯಿರುವುದರಿಂದ ನ್ಯೂಜೆರ್ಸಿಯ ನೆವಾರ್ಕ್‌ ಲಿಬರ್ಟಿ ಇಂಟರ್‌ ನ್ಯಾಷನಲ್‌ ಮತ್ತು ನ್ಯೂಯಾರ್ಕ್‌ ನಗರದ ಲಾಗಾರ್ಡಿಯಾ ಏರ್‌ಪೋರ್ಟ್‌ಗಳಲ್ಲಿ ಬುಧವಾರ ಮಧ್ಯಾಹ್ನ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಯಿತು.

ಹೊಗೆಯು ಈ ವಾರ ಪೂರ್ವ ಭಾಗಗಳಲ್ಲಿ ಹರಡುವ ಮುನ್ಸೂಚನೆಯಿರುವುದರಿಂದ, ದಕ್ಷಿಣ ಕೆರೊಲಿನಾದಿಂದ ನ್ಯೂ ಹ್ಯಾಂಪ್‌ಶೈರ್‌ವರೆಗೆ ಸುಮಾರು 850 ಮೈಲಿ ಉದ್ದದ ಹಾದಿಯಲ್ಲಿ ವಾಯು ಗುಣಮಟ್ಟದ ಎಚ್ಚರಿಕೆಗಳನ್ನು ನೀಡಲಾಗಿದೆ.

ನ್ಯೂಯಾರ್ಕ್‌ ನಗರದ ಮೇಯರ್‌ ಎರಿಕ್‌ ಆಡಮ್ಸ್‌, ಈ ವಾರ ಹೊರಾಂಗಣ ಚಟುವಟಿಕೆಗಳನ್ನು ಮಿತಿಗೊಳಿಸುವಂತೆ ಜನರಿಗೆ ಒತ್ತಾಯಿಸಿದ್ದಾರೆ. ಸರ್ಕಾರಿ ಶಾಲೆಗಳು ತೆರೆದಿರುತ್ತವೆ ಆದರೆ ಯಾವುದೇ ಹೊರಾಂಗಣ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

ಕಳಪೆ ಗಾಳಿಯ ಗುಣಮಟ್ಟದಿಂದಾಗಿ ಹೊರಗಿನ ಸಮಯವನ್ನು ಮಿತಿಗೊಳಿಸುವಂತೆ ನ್ಯೂಜೆರ್ಸಿಯ ಅಧಿಕಾರಿಗಳು ನಿವಾಸಿಗಳನ್ನು ಒತ್ತಾಯಿಸಿದ್ದು, ಹೊರಗೆ ಕೆಲಸ ಮಾಡುವ ಜನರು ಎನ್‌95 ಮಾಸ್ಕ್‌ ಧರಿಸಬೇಕೆಂದು ಸೂಚಿಸಿದ್ದಾರೆ. ರಾಜ್ಯಾದಾದ್ಯಂತ ಗಾಳಿಯ ಗುಣಮಟ್ಟದಿಂದಾಗಿ ನ್ಯೂಜೆರ್ಸಿಯ ಹಲವಾರು ಶಾಲೆಗಳ ಬಿಡುವಿನ ಸಮಯ ಮತ್ತು ಇತರ ಹೊರಾಂಗಣ ಚಟುವಟಿಕೆಗಳನ್ನು ರದ್ದುಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.