ADVERTISEMENT

ಪ್ರಜಾಪ್ರಭುತ್ವದ ದುರ್ಬಲಗೊಳಿಸಲು ಸಾಮಾಜಿಕ ಮಾಧ್ಯಮಗಳ ವಿನ್ಯಾಸ: ಬರಾಕ್ ಒಬಾಮ

ಐಎಎನ್ಎಸ್
Published 22 ಏಪ್ರಿಲ್ 2022, 6:13 IST
Last Updated 22 ಏಪ್ರಿಲ್ 2022, 6:13 IST
ಬರಾಕ್ ಒಬಾಮ
ಬರಾಕ್ ಒಬಾಮ   

ವಾಷಿಂಗ್ಟನ್: ಸುದೀರ್ಘ ಸಮಯದ ಬಳಿಕ ಮೌನ ಮುರಿದಿರುವ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಸಾಮಾಜಿಕ ಮಾಧ್ಯಮ ವೇದಿಕೆಗಳು ಪ್ರಜಾಪ್ರಭುತ್ವವನ್ನು ನಾಶಮಾಡಲು ಉತ್ತಮವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ದೂರಿದ್ದಾರೆ.

ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದ ಕಾರ್ಯಕ್ರಮವೊಂದರಲ್ಲಿ ಗುರುವಾರ ಮಾತನಾಡಿದ ಒಬಾಮಾ, ಸದ್ಯದ ಪರಿಸ್ಥಿತಿಯು 'ಇತಿಹಾಸದಲ್ಲಿ ಮತ್ತೊಂದು ಪ್ರಕ್ಷುಬ್ಧ, ಅಪಾಯಕಾರಿ ಕ್ಷಣ' ಎಂದು ಕರೆದರು.

ತಪ್ಪು ಮಾಹಿತಿಯು ನಮ್ಮ ಪ್ರಜಾಪ್ರಭುತ್ವಕ್ಕೆ ಅಪಾಯವಾಗಿದೆ ಮತ್ತು ಅದನ್ನು ತೊಡೆದುಹಾಕಲು ನಾವು ಒಟ್ಟಾಗಿ ಕೆಲಸ ಮಾಡದ ಹೊರತು ಅದು ಮುಂದುವರಿಯುತ್ತದೆ ಎಂದ ಅವರು, ರಷ್ಯಾದ 2016 ರ ಚುನಾವಣಾ ಹಸ್ತಕ್ಷೇಪ ಮತ್ತು ಉಕ್ರೇನ್ ಮೇಲಿನ ಆಕ್ರಮಣದ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ADVERTISEMENT

2009 ರಿಂದ 2017 ರವರೆಗೆ 44 ನೇ ಅಮೆರಿಕದ ಅಧ್ಯಕ್ಷರಾಗಿ ಒಬಾಮ ಸೇವೆ ಸಲ್ಲಿಸಿದ್ದರು.

'ಪುಟಿನ್, ಮತ್ತು ಸ್ಟೀವ್ ಬ್ಯಾನನ್ (ಡೊನಾಲ್ಡ್ ಟ್ರಂಪ್ ಅವರ ಹಿರಿಯ ಸಲಹೆಗಾರ) ಅವರಂತಹ ಜನರು, ಪ್ರಜಾಪ್ರಭುತ್ವ ಸಂಸ್ಥೆಗಳನ್ನು ದುರ್ಬಲಗೊಳಿಸಲು ಹರಡುವ ಮಾಹಿತಿಯನ್ನು (ತಪ್ಪು ಮಾಹಿತಿ) ನಂಬುವ ಅಗತ್ಯವಿಲ್ಲ ಎಂಬುದನ್ನು ಜನರು ಅರ್ಥಮಾಡಿಕೊಳ್ಳುತ್ತಾರೆ' ಎಂದು ಒಬಾಮಾ ಒತ್ತಿ ಹೇಳಿದರು.

ಸಾಮಾಜಿಕ ಮಾಧ್ಯಮ ಕಂಪನಿಗಳು ಬಿತ್ತಿದ್ದನ್ನು ನಾವು ಕೊಯ್ಯುತ್ತಿರುವಾಗ, ವಿಭಿನ್ನ ಆಯ್ಕೆಗಳನ್ನು ಮಾಡಲು ತುಂಬಾ ತಡ ಮಾಡಬಾರದು ಎಂದು ಒಬಾಮಾ ಹೇಳಿರುವುದಾಗಿ ಟೆಕ್‌ಕ್ರಂಚ್ ವರದಿ ಮಾಡಿದೆ.

ನಾವು ಈಗ ನೋಡುತ್ತಿರುವ ಎಲ್ಲಾ ಸಮಸ್ಯೆಗಳು ಈ ಹೊಸ ತಂತ್ರಜ್ಞಾನದ ಅನಿವಾರ್ಯ ಉಪಉತ್ಪನ್ನವಲ್ಲ. ಅವುಗಳು ಅಂತರ್ಜಾಲದಲ್ಲಿ ಮುಖ್ಯವಾಗಿ ಸಾಮಾಜಿಕ ಮಾಧ್ಯಮಗಳ ವೇದಿಕೆಗಳಲ್ಲಿ ಪ್ರಾಬಲ್ಯ ಸಾಧಿಸಲು ಮುಂದಾಗಿರುವ ಕಂಪನಿಗಳು ಮಾಡಿದ ನಿರ್ಧಿಷ್ಟ ಆಯ್ಕೆಗಳ ಫಲಿತಾಂಶವಾಗಿದೆ' ಎಂದು ಅವರು ಹೇಳಿದರು.

ಸತ್ಯ ಮತ್ತು ಸುಳ್ಳು, ಸಹಕಾರ ಮತ್ತು ಸಂಘರ್ಷದ ನಡುವಿನ ಸ್ಪರ್ಧೆಯಲ್ಲಿ 'ಈ ವೇದಿಕೆಗಳ ವಿನ್ಯಾಸವು ನಮ್ಮನ್ನು ತಪ್ಪು ದಿಕ್ಕಿಗೆ ಚಲಿಸುವಂತೆ ಮಾಡುತ್ತಿದೆ ಮತ್ತು ನಾವು ಅದರ ಫಲಿತಾಂಶಗಳನ್ನು ಈಗ ನೋಡುತ್ತಿದ್ದೇವೆ' ಎಂದು ಒಬಾಮಾ ತಮ್ಮ ಭಾಷಣದಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.