ADVERTISEMENT

ಎನ್‌ಟಿಜೆ ಕಚೇರಿ ಮೇಲೆ ದಾಳಿ: ಸಂಚುಕೋರನ ತಂದೆ, ಇಬ್ಬರು ಸಹೋದರರ ಹತ್ಯೆ

ಪಿಟಿಐ
Published 28 ಏಪ್ರಿಲ್ 2019, 19:01 IST
Last Updated 28 ಏಪ್ರಿಲ್ 2019, 19:01 IST
   

ಕೊಲಂಬೊ: ಶ್ರೀಲಂಕಾದ ಕಟ್ಟಣಕುಡಿ ನಗರದಲ್ಲಿರುವ ನ್ಯಾಷನಲ್‌ ತೌಹೀದ್‌ ಜಮಾತ್‌ (ಎನ್‌ಟಿಜೆ) ಸಂಘಟನೆಯ ಮುಖ್ಯ ಕಚೇರಿ ಮೇಲೆ ಭಾನುವಾರ ಪೊಲೀಸರು ದಾಳಿ ನಡೆಸಿದರು.

ಈಸ್ಟರ್‌ ದಿನದಂದು ನಡೆದ ಸರಣಿ ಬಾಂಬ್‌ ಸ್ಫೋಟಕ್ಕೆ ಎನ್‌ಟಿಜೆ ಸಂಚು ರೂಪಿಸಿತ್ತು ಎನ್ನಲಾಗಿದೆ. ಎನ್‌ಟಿಜೆಯನ್ನು ಶ್ರೀಲಂಕಾ
ಸರ್ಕಾರ ಶನಿವಾರ ನಿಷೇಧಿಸಿದ ಬಳಿಕ ಸೇನಾ ಸಿಬ್ಬಂದಿ ಮತ್ತು ಪೊಲೀಸರು ಈ ಸಂಘಟನೆಯ ಸದಸ್ಯರ ಪತ್ತೆಗೆ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದರು.

ಎನ್‌ಟಿಜೆ ನಾಯಕ ಝಹ್ರಾನ್‌ ಹಶೀಂ ತಂದೆ ಮತ್ತು ಇಬ್ಬರು ಸಹೋದರು ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆ ಸಂದರ್ಭದಲ್ಲಿ ಸಾವಿಗೀಡಾಗಿದ್ದಾರೆ.

ಶುಕ್ರವಾರ ರಾತ್ರಿ ಇವರ ಮನೆ ಮೇಲೆ ಸೇನೆ ಸಹಯೋಗದಲ್ಲಿ ಪೊಲೀಸರು ದಾಳಿ ನಡೆಸಿದ್ದರು. ದಾಳಿ ಸಂದರ್ಭದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿಒಟ್ಟು 15 ಮಂದಿ ಸಾವಿಗೀಡಾಗಿದ್ದರು. ಝೈನೀ ಹಶೀಂ, ರಿಲ್ವಾನ್‌ ಹಶೀಂ ಮತ್ತು ಇವರ ತಂದೆ ಮೊಹಮ್ಮದ್‌ ಹಶೀಂ ಮೃತಪಟ್ಟಿದ್ದರು.

‘ಇಸ್ಲಾಂ ನಂಬದವರ ವಿರುದ್ಧ ಯುದ್ಧ ಸಾರಬೇಕು. ಇದಕ್ಕಾಗಿ ಹುತಾತ್ಮರಾಗಲು ಸಹ ಸಿದ್ಧರಾಗಿರಬೇಕು’ ಎಂದು ಇವರು ನೀಡಿದ್ದ ಹೇಳಿಕೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

‘ಈ ಭೂಮಿಯನ್ನು ಕಾಪಾಡಲು ನಾವು ಜಿಹಾದ್‌ ನಡೆಸಲೇಬೇಕು. ಮುಸ್ಲಿಮರನ್ನು ನಾಶಪಡಿಸುತ್ತಿರುವವರಿಗೆ ತಕ್ಕ ಪಾಠ ಕಲಿಸಬೇಕು’ ಎಂದು ರಿಲ್ವಾನ್‌ ಈ ವಿಡಿಯೊದಲ್ಲಿ ಹೇಳಿಕೆ ನೀಡಿದ್ದ

ಸ್ಫೋಟಿಸಿಕೊಂಡವರು ಐಎಸ್‌ ಉಗ್ರರು: ಶುಕ್ರವಾರದ ಕಾರ್ಯಾಚರಣೆ ಸಂದರ್ಭದಲ್ಲಿ ಸ್ಫೋಟಿಸಿಕೊಂಡ ಮೂವರು ತನ್ನ ಸಂಘಟನೆಗೆ ಸೇರಿದ್ದಾರೆ ಎಂದು ಐಎಸ್‌ ಹೇಳಿಕೊಂಡಿದೆ.

ಈ ಉಗ್ರರಿದ್ದ ಸ್ಥಳದಿಂದ ಅಪಾರ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಜತೆಗೆ, ಆತ್ಮಾಹುತಿ ದಾಳಿ ನಡೆಸುವ ಕಿಟ್‌ಗಳು, ಸೇನಾ ಸಮವಸ್ತ್ರಗಳು, ಐಎಸ್‌ ಧ್ವಜಗಳು ಸಹ ದೊರೆತಿವೆ.

ಬಂಧನ: ತಮಿಳು ಶಿಕ್ಷಕಿ ಮತ್ತು ಪ್ರಾಂಶುಪಾಲ ಸೇರಿದಂತೆ ಇದುವರೆಗೆ 106 ಮಂದಿಯನ್ನು ಬಂಧಿಸಲಾಗಿದೆ.

40 ವರ್ಷದ ಶಿಕ್ಷಕಿ ಬಳಿ 50 ಸಿಮ್‌ ಕಾರ್ಡ್‌ಗಳು ಪತ್ತೆಯಾಗಿವೆ. ಬಂಧಿತರನ್ನು ಅಪರಾಧ ತನಿಖಾ ವಿಭಾಗದ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.