ADVERTISEMENT

ಶ್ರೀಲಂಕಾ ಬಿಕ್ಕಟ್ಟು: 100ನೇ ದಿನಕ್ಕೆ ಜನರ ಹೋರಾಟ

ಅಧ್ಯಕ್ಷೀಯ ವ್ಯವಸ್ಥೆ ರದ್ದು, ಪೂರ್ಣ ಬದಲಾವಣೆವರೆಗೆ ಹೋರಾಟಕ್ಕೆ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 17 ಜುಲೈ 2022, 18:23 IST
Last Updated 17 ಜುಲೈ 2022, 18:23 IST
ನಾಗರಿಕರ ಪ್ರತಿಭಟನೆ ಹಿನ್ನೆಲೆಯಲ್ಲಿ ಕೊಲಂಬೊದಲ್ಲಿ ಸಂಸತ್‌ ಕಟ್ಟಡದ ಬಳಿ ಬಿಗಿ ಭದ್ರತೆ ನಿಯೋಜಿಸಲಾಗಿದೆ    –ಎಎಫ್‌ಪಿ ಚಿತ್ರ
ನಾಗರಿಕರ ಪ್ರತಿಭಟನೆ ಹಿನ್ನೆಲೆಯಲ್ಲಿ ಕೊಲಂಬೊದಲ್ಲಿ ಸಂಸತ್‌ ಕಟ್ಟಡದ ಬಳಿ ಬಿಗಿ ಭದ್ರತೆ ನಿಯೋಜಿಸಲಾಗಿದೆ    –ಎಎಫ್‌ಪಿ ಚಿತ್ರ   

ಕೊಲಂಬೊ: ದೇಶದಲ್ಲಿ ಅಧ್ಯಕ್ಷೀಯ ವ್ಯವಸ್ಥೆಯನ್ನು ರದ್ದು ಪಡಿಸುವುದು ಸೇರಿದಂತೆ ಆಡಳಿತ
ವ್ಯವಸ್ಥೆಯಲ್ಲಿ ಸಂಪೂರ್ಣ ಬದಲಾವಣೆ ಆಗುವವರೆಗೂ ಹೋರಾಟ ಮುಂದುವರಿಸಲು ಶ್ರೀಲಂಕಾದ ನಾಗರಿಕರು ತೀರ್ಮಾನಿಸಿದ್ದಾರೆ.

ದೇಶದ ಆರ್ಥಿಕ ವ್ಯವಸ್ಥೆ ವೈಫಲ್ಯದ ಹಿಂದೆಯೇ ಸರ್ಕಾರ, ಆಡಳಿತ ವ್ಯವಸ್ಥೆಯ ವಿರುದ್ಧಜನತೆ ನಡೆಸುತ್ತಿರುವ ಹೋರಾಟ ಭಾನುವಾರ 100ನೇ ದಿನಕ್ಕೆ ಕಾಲಿಟ್ಟಿದೆ.

ಸರ್ಕಾರ ವಿರೋಧಿ ಪ್ರತಿಭಟನೆಯು ಕೊಲಂಬೊದಲ್ಲಿ ಏಪ್ರಿಲ್‌ 9ರಂದು ಆರಂಭವಾಗಿತ್ತು. ನಾಗರಿಕರ ಪ್ರತಿ ಭಟನೆಗೆ ಮಣಿದು ಮೊದಲು ಪ್ರಧಾನಿ ಮತ್ತು ಈಚೆಗೆ ಅಧ್ಯಕ್ಷ ಗೊಟಬಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ADVERTISEMENT

‘ನಾವು ನಮ್ಮ ಗುರಿ ಸಾಧಿಸು ವವರೆಗೂ ಹೋರಾಟ ನಡೆಸಲಿದ್ದೇವೆ. ವ್ಯವಸ್ಥೆಯಲ್ಲಿ ಸಂಪೂರ್ಣ ಬದಲಾವಣೆ ತರಬೇಕು ಎಂಬುದೇ ನಮ್ಮ ಒಟ್ಟು ಬೇಡಿಕೆ’ ಎಂದು ಹೋರಾಟಗಾರರಲ್ಲಿ ಒಬ್ಬರಾದ ಜೀವಂತಾ ಪೀರಿಸ್‌ ಭಾನು ವಾರ ಪ್ರತಿಕ್ರಿಯಿಸಿದರು. ‘ಇದೊಂದು ಸ್ವಾತಂತ್ರ್ಯ ಹೋರಾಟ’ ಎಂದೂ ಅವರು ಬಣ್ಣಿಸಿದರು.

ತೀವ್ರ ಹೋರಾಟ ನಡೆಸಿದ್ದ ಜನರು ಪ್ರಧಾನಿ ಮತ್ತು ಅಧ್ಯಕ್ಷರ ನಿವಾಸಕ್ಕೂ ಲಗ್ಗೆ ಹಾಕಿದ್ದರು. ಜನಾಕ್ರೋಶಕ್ಕೆ ಮಣಿದ ಅಧ್ಯಕ್ಷ, 73 ವರ್ಷದ ಗೊಟಬಯ ರಾಜಪಕ್ಸ ಅವರು ಕಳೆದ ಬುಧವಾರ ದೇಶದಿಂದಲೇ ಪಲಾಯನ ಮಾಡಿದ್ದು, ಗುರುವಾರ ಸಿಂಗಪುರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಶುಕ್ರವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಹಂಗಾಮಿ ಅಧ್ಯಕ್ಷರಾಗಿರುವ ರಾನಿಲ್ ವಿಕ್ರಮಸಿಂಘೆ ಅವರು ಈಗ ಹೋರಾ ಟಗಾರರ ಮುಂದಿನ ಗುರಿಯಾಗಿದ್ದು, ಇವರ ಪದಚ್ಯುತಿಗಾಗಿ ಈಗಾಗಲೇ ಹೋರಾಟ ಆರಂಭವಾಗಿದೆ. ರಾಜಪಕ್ಸ ಆಡಳಿತ ಅಂತ್ಯಗೊಳಿಸಲು ಜುಲೈ 5ರಂದು ನಾವು ಕ್ರಿಯಾಯೋಜನೆ ಪ್ರಕಟಿಸಿದ್ದೆವು, ಈಗ ಅದರಲ್ಲಿ ಯಶಸ್ವಿಯಾಗಿದ್ದೇವೆ ಎಂದು ಹೋರಾಟಗಾರರೊಬ್ಬರು ತಿಳಿಸಿದರು.

ಸರ್ಕಾರದ ಬಗ್ಗೆ ನಮಗೆ ಭೀತಿಯಿಲ್ಲ. ಅಧ್ಯಕ್ಷೀಯ ವ್ಯವಸ್ಥೆಯನ್ನು ಪೂರ್ಣವಾಗಿ ರದ್ದುಪಡಿಸಬೇಕು ಎಂಬುದೇ ನಮ್ಮ ಬೇಡಿಕೆ ಎಂದು ಹೋರಾಟಗಾರರು ಸ್ಪಷ್ಟಪಡಿಸಿದ್ದಾರೆ. ರಾಜಧಾನಿಯಲ್ಲಿ ಪ್ರಮುಖ ಕಟ್ಟಡಗಳಿಗೆ ಲಗ್ಗೆ ಹಾಕಿದ್ದ ಅವರು ಸದ್ಯ ಅಧ್ಯಕ್ಷರ ನಿವಾಸ ಹೊರತು ಪಡಿಸಿ ಉಳಿದ ಕಟ್ಟಡಗಳನ್ನು ತೆರವುಗೊಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.