ADVERTISEMENT

ಶ್ರೀಲಂಕಾದ ಸಂವಿಧಾನ ತಿದ್ದುಪಡಿ ಅಧಿಸೂಚನೆ: ಆಡಳಿತಾರೂಢ ಪಕ್ಷದಲ್ಲೇ ವಿರೋಧ

ಪಿಟಿಐ
Published 13 ಸೆಪ್ಟೆಂಬರ್ 2020, 10:20 IST
Last Updated 13 ಸೆಪ್ಟೆಂಬರ್ 2020, 10:20 IST
ಮಹಿಂದಾ ರಾಜಪಕ್ಸ
ಮಹಿಂದಾ ರಾಜಪಕ್ಸ   

ಕೊಲಂಬೊ: ಶ್ರೀಲಂಕಾ ಸರ್ಕಾರದ ಉದ್ದೇಶಿತ 20ನೇ ಸಂವಿಧಾನ ತಿದ್ದುಪಡಿ ಪ್ರಸ್ತಾವಕ್ಕೆ ಆಡಳಿತಾರೂಢ ಎಸ್‌ಎಲ್‌ಪಿಪಿ ಪಕ್ಷದಲ್ಲೇ ವಿರೋಧ ವ್ಯಕ್ತವಾಗಿದೆ.

20ನೇ ಸಂವಿಧಾನ ತಿದ್ದುಪಡಿ ಕರಡು ಪ್ರತಿಗೆ ಶ್ರೀಲಂಕಾ ಸರ್ಕಾರವುಇದೇ‌ 2ರಂದು ಅನುಮೋದನೆ ನೀಡಿತ್ತು.

2015ರ 19ನೇ ಸಂವಿಧಾನ ತಿದ್ದುಪಡಿಯ ವೇಳೆ ಅಧ್ಯಕ್ಷರ ಅಧಿಕಾರವನ್ನು ಮೊಟಕುಗೊಳಿಸಿ, ಸಂಸತ್ತಿನ ಅಧಿಕಾರವನ್ನು ಬಲಪಡಿಸುವ ವಿಧೇಯಕವನ್ನು ಅಂಗೀಕರಿಸಲಾಗಿತ್ತು. ಶ್ರೀಲಂಕಾದ ಇತಿಹಾಸದಲ್ಲೇ ಇದೊಂದು ಮಹತ್ವದ ಬದಲಾವಣೆಯಾಗಿತ್ತು. ಏಕೆಂದರೆ 1978ರಿಂದಲೂ ಸಿಂಹಳೀಯ ನಾಡಿನಲ್ಲಿ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ನೀಡಲಾಗಿತ್ತು.

ADVERTISEMENT

20ನೇ ಸಂವಿಧಾನ ತಿದ್ದುಪಡಿಯು ಅಧ್ಯಕ್ಷರ ಪರಮಾಧಿಕಾರವನ್ನು ಪುನರ್‌ಸ್ಥಾಪಿಸಲು ನೆರವಾಗಲಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಕ್ಕೂ ಕಡಿವಾಣ ಹಾಕಲಿದೆ.

‘20ಎ ಅಧಿಸೂಚನೆಯನ್ನು ಪರಿಶೀಲಿಸಲು ಒಂಬತ್ತು ಸಚಿವರನ್ನೊಳಗೊಂಡ ಸಮಿತಿಯೊಂದನ್ನು ರಚಿಸಲಾಗಿದೆ. ಅಗತ್ಯವಿದ್ದರೆ ಹೊಸದಾಗಿ ಗೆಜೆಟ್‌ ಅಧಿಸೂಚನೆ ಹೊರಡಿಸಲಾಗುತ್ತದೆ’ ಎಂದು ಪ್ರಧಾನ ಮಂತ್ರಿ ಮಹಿಂದಾ ರಾಜಪಕ್ಸ ಅವರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

‘ಸರ್ಕಾರವು ಅಧಿಸೂಚನೆ ಹೊರಡಿಸಿದ ನಂತರ ಎಸ್‌ಎಲ್‌ಪಿಪಿ ಸಂಸದರು ಈ ಬಗ್ಗೆ ಅಪಸ್ವರ ಎತ್ತಿದ್ದರು. ಕೆಲವರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು’ ಎಂದು ಪಕ್ಷದ ಸದಸ್ಯರೊಬ್ಬರು ತಿಳಿಸಿದ್ದಾರೆ.

‘ಹೊಸ ವಿಧೇಯಕವು ಈಗಿನ ಸ್ವರೂಪದಲ್ಲೇ ಅಂಗೀಕೃತಗೊಂಡರೆ ಪ್ರಧಾನಿ ಮಹಿಂದಾ ಅವರ ಅಧಿಕಾರವು ಮೊಟಕುಗೊಳ್ಳಲಿದೆ. ಅವರ ಕಿರಿಯ ಸಹೋದರ ಹಾಗೂ ಅಧ್ಯಕ್ಷ ಗೋಟಬಯಾ ರಾಜಪಕ್ಸಗೆ ಹೆಚ್ಚಿನ ಅಧಿಕಾರ ಲಭಿಸಲಿದೆ’ ಎಂದು ಅವರು ನುಡಿದಿದ್ದಾರೆ.

ಒಂಬತ್ತು ಸಚಿವರನ್ನೊಳಗೊಂಡ ಸಮಿತಿಯು ಇದೇ 15ರಂದು ತನ್ನ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.