ADVERTISEMENT

ಶ್ರೀಲಂಕಾ ಸಂಸತ್‌ ಚುನಾವಣೆ: ಮತ್ತೆ ಅಧಿಕಾರ ಹಿಡಿದ ಮಹಿಂದ ರಾಜಪಕ್ಸೆ

ಏಜೆನ್ಸೀಸ್
Published 7 ಆಗಸ್ಟ್ 2020, 21:17 IST
Last Updated 7 ಆಗಸ್ಟ್ 2020, 21:17 IST
ಟಿ.ವಿ. ಮೂಲಕ ಫಲಿತಾಂಶ ವೀಕ್ಷಣೆ ಮಾಡುತ್ತಿರುವ ರಾಜಪಕ್ಸೆ
ಟಿ.ವಿ. ಮೂಲಕ ಫಲಿತಾಂಶ ವೀಕ್ಷಣೆ ಮಾಡುತ್ತಿರುವ ರಾಜಪಕ್ಸೆ   

ಕೊಲಂಬೊ: ಶ್ರೀಲಂಕಾದ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಭಾವಿ ರಾಜಪಕ್ಸ ಕುಟುಂಬದ ಸಾರಥ್ಯವುಳ್ಳ ಶ್ರೀಲಂಕಾ ಪೀಪಲ್ಸ್ ಪಾರ್ಟಿ (ಎಸ್.ಎಲ್.ಪಿ.ಪಿ) ಭಾರಿ ಬಹುಮತದಿಂದ ಜಯಗಳಿಸಿದ್ದು, ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಸ್ಥಾನಗಳನ್ನು ಗೆದ್ದುಕೊಂಡಿದೆ. ಈ ಮೂಲಕ ರಾಜಪಕ್ಸ ಸಹೋದರರ ಪ್ರಾಬಲ್ಯ ಇನ್ನಷ್ಟು ದೃಢವಾಗಿದೆ.

ಪ್ರಧಾನಿ ಮಹಿಂದಾ ರಾಜಪಕ್ಸ ನೇತೃತ್ವದ ಎಸ್.ಎಸ್.ಪಿ.ಪಿ ಒಟ್ಟು 145 ಕ್ಷೇತ್ರಗಳಲ್ಲಿ ಜಯಗಳಿಸಿದೆ. ಸಂಸತ್ತಿನ ಸದಸ್ಯ ಬಲ 225 ಆಗಿದ್ದು, ಮೈತ್ರಿ ಪಕ್ಷಗಳ ಜೊತೆಗೂಡಿ ಒಟ್ಟು 150 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ.

22 ಚುನಾವಣಾ ಜಿಲ್ಲೆಗಳ ಪೈಕಿ ನಾಲ್ಕನ್ನು ಹೊರತುಪಡಿಸಿ ಉಳಿದೆಲ್ಲ ಕಡೆ ಜಯಗಳಿಸಿದ್ದು, ಪಕ್ಷದ ಮತಗಳಿಕೆಯ ಪ್ರಮಾಣ ಶೇ 59.9 ಆಗಿದೆ. ಬಹುಸಂಖ್ಯಾತ ಸಿಂಹಳ ಸಮುದಾಯದ ಪ್ರಾಬಲ್ಯವುಳ್ಳ ದೇಶದ ದಕ್ಷಿಣ ಭಾಗದಲ್ಲಿ ಪಕ್ಷದ ಗೆಲುವಿನ ಅಂತರ ಶೇ 60ಕ್ಕೂ ಅಧಿಕವಾಗಿದೆ.

ADVERTISEMENT

ಫಲಿತಾಂಶ ಕುರಿತು ಟ್ವೀಟ್ ಮಾಡಿರುವ 74 ವರ್ಷದ ಪ್ರಧಾನಿ ಮಹೀಂದಾ ರಾಜಪಕ್ಸ ಅವರು, ‘ಪಕ್ಷದ ಮೇಲೆ ಶ್ರೀಲಂಕಾದ ಜನರು ಇಟ್ಟಿರುವ ವಿಶ್ವಾಸಕ್ಕೆ ಕೃತಜ್ಞತೆಗಳು. ತಮ್ಮ ಅಧಿಕಾರದ ಅವಧಿಯಲ್ಲಿ ದೇಶಕ್ಕೆ ಎಂದಿಗೂ ನಿರಾಸೆ ಆಗುವುದಿಲ್ಲ’ ಎಂದು ಹೇಳಿದ್ದಾರೆ.

ಅಧ್ಯಕ್ಷ ಗೋಟಬಯ ರಾಜಪಕ್ಸ ಅವರ ಮೇಲೆ ಶ್ರೀಲಂಕನ್ನರು ವಿಶ್ವಾಸವಿಟ್ಟಿದ್ದಾರೆ. ಚುನಾವಣಾ ಪ್ರಣಾಳಿಕೆ `ಸೌಭಾಗ್ಯೆ ದಕ್ಕಮ'ಗೆ ಮತ ನೀಡಿದ್ದಾರೆ. ಪಕ್ಷದ ಎಂದಿಗೂ ಜನರಿಗೆ ನಿರಾಸೆ ಮೂಡಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಮೋದಿ ಅಭಿನಂದನೆ: ಮಹಿಂದಾ ರಾಜಪಕ್ಸ ಅವರಿಗೆ ಚುನಾವಣಾ ಗೆಲುವಿಗಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಸಿದ್ದಾರೆ. ದ್ವಿಪಕ್ಷೀಯ ಸಹಕಾರ ಮತ್ತು ವಿಶೇಷ ಒಡಂಬಡಿಕೆಗಳನ್ನು ಇನ್ನಷ್ಟು ಎತ್ತರಕ್ಕೆ ಒಯ್ಯುವ ನಿಟ್ಟಿನಲ್ಲಿ ಒಟ್ಟುಗೂಡಿ ಕೆಲಸ ಮಾಡೋಣ ಎಂದು ಮೋದಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.