ADVERTISEMENT

ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸ ರಾಜೀನಾಮೆ

ಏಜೆನ್ಸೀಸ್
Published 9 ಮೇ 2022, 13:38 IST
Last Updated 9 ಮೇ 2022, 13:38 IST
   

ಕೊಲಂಬೊ(ಪಿಟಿಐ/ಎಎಫ್‌ಪಿ): ತೀವ್ರ ಆರ್ಥಿಕ ಬಿಕ್ಕಟ್ಟಿನ ಕಾರಣ ಶ್ರೀಲಂಕಾದಲ್ಲಿ ಕಳೆದೊಂದು ತಿಂಗಳಿನಿಂದ ನಡೆದಿರುವ ಪ್ರತಿಭಟನೆಗಳ ನಡುವೆಯೇ, ಪ್ರಧಾನಿ ಮಹಿಂದಾ ರಾಜಪಕ್ಸ ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಇದರ ಬೆನ್ನಲ್ಲೇ, ರಾಜಪಕ್ಸ ಸಂಪುಟದ ಇಬ್ಬರು ಸಚಿವರೂ ರಾಜೀನಾಮೆ ಘೋಷಣೆ ಮಾಡಿದ್ದಾರೆ.

ಮಹಿಂದಾ ರಾಜಪಕ್ಸ ಅವರು ತಮ್ಮ ಕಿರಿಯ ಸಹೋದರ, ಅಧ್ಯಕ್ಷ ಗೊಟಬಯ ರಾಜಪಕ್ಸ ಅವರಿಗೆ ರಾಜೀನಾಮೆ ಪತ್ರ ಕಳುಹಿಸಿದ್ದಾರೆ ಎಂದು ಅವರ ವಕ್ತಾರ ರೋಹನ್ ವೆಲಿವಿಟಾ ತಿಳಿಸಿದ್ದಾರೆ.

‘ನಾನು ತಕ್ಷಣದಿಂದಲೇ ಜಾರಿಗೆ ಬರುವಂತೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಇದರಿಂದ ನೀವು ಎಲ್ಲ ಪಕ್ಷಗಳನ್ನು ಒಳಗೊಂಡ ಸರ್ಕಾರವನ್ನು ರಚಿಸುವ ಮೂಲಕ ದೇಶವನ್ನು ಸದ್ಯದ ಆರ್ಥಿಕ ಬಿಕ್ಕಟ್ಟಿನಿಂದ ಪಾರು ಮಾಡಲು ಪ್ರಯತ್ನಿಸಬಹುದು’ ಎಂದು ಮಹಿಂದಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

1948ರಲ್ಲಿ ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆದ ನಂತರ, ಅತ್ಯಂತ ಭೀಕರ ಎನ್ನಲಾದ ಆರ್ಥಿಕ ಬಿಕ್ಕಟ್ಟಿಗೆ ಶ್ರೀಲಂಕಾ ಸಿಲುಕಿದೆ.

ವಿದೇಶಿ ಕರೆನ್ಸಿಯ ತೀವ್ರ ಕೊರತೆಯಿಂದಾಗಿ ಆಹಾರ, ಔಷಧಿ, ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಆಮದಿಗೂ ತೊಡಕಾಗಿದೆ. ಅಗತ್ಯ ವಸ್ತುಗಳ ಕೊರತೆ ಜೊತೆಗೆ ತೀವ್ರ ಬೆಲೆ ಏರಿಕೆ ಅಲ್ಲಿನ ಜನರನ್ನು ಹೈರಾಣಾಗಿಸಿದೆ. ಹೀಗಾಗಿ, ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.

ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಅಧಿಕಾರಿಗಳು ಸೋಮವಾರ ದೇಶದಾದ್ಯಂತ ಕರ್ಫ್ಯೂ ಘೋಷಣೆ ಮಾಡಿದ್ದಾರೆ.

ಈ ನಡುವೆ, ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ಕಚೇರಿಯ ಹೊರಗೆ ಸರ್ಕಾರದ ಪರವಾದ ಗುಂಪುಗಳು, ಪ್ರತಿಭಟನಾಕಾರರ ಮೇಲೆ ದಾಳಿ ಮಾಡಿದ ಬಳಿಕ ರಾಜಧಾನಿ ಕೊಲಂಬೊದಲ್ಲಿ ಸೇನೆ ನಿಯೋಜಿಸಲಾಗಿದೆ. ಗುಂಪು ಘರ್ಷಣೆಯಲ್ಲಿ 130ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ರಾಜೀನಾಮೆಗೂ ಮುನ್ನ ತಮ್ಮ ಬೆಂಬಲಿಗರು ಮತ್ತು ಪಕ್ಷದ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ್ದ ಮಹಿಂದಾ ರಾಜಪಕ್ಸ ಅವರು, ದೇಶದ ಜನತೆಗಾಗಿ ಯಾವ ತ್ಯಾಗವನ್ನು ಬೇಕಾದರೂ ಮಾಡಲು ಸಿದ್ಧ ಎಂದು ಘೋಷಿಸಿದ್ದರು.

ದೇಶದ ಆರ್ಥಿಕತೆ ಸುಧಾರಣೆ ನಿಟ್ಟಿನಲ್ಲಿ ಮಧ್ಯಂತರ ಸರ್ಕಾರ ರಚನೆ ಮಾಡಬೇಕೆಂಬ ಒತ್ತಡ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ಮೇಲೆ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಮಧ್ಯಂತರ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡಲು ಪ್ರಧಾನಿ ಮಹಿಂದಾ ರಾಜಪಕ್ಸ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ವರದಿಗಳ ಬಳಿಕ ಹಿಂಸಾಚಾರ ಭುಗಿಲೆದ್ದಿತ್ತು.

ಜನತೆ ಹಿಂಸಾಚಾರಕ್ಕೆ ಇಳಿಯದೆ ಶಾಂತಿ ಕಾಪಾಡಿಕೊಳ್ಳಬೇಕು. ಜೊತೆಗೆ ಹಿಂಸೆಯಿಂದ ಮತ್ತಷ್ಟು ಹಿಂಸೆಯೇ ಹೆಚ್ಚಾಗುತ್ತದೆ ಎಂದು ಗೊಟಬಯ ರಾಜಪಕ್ಸ ಮತ್ತು ಮಹಿಂದಾ ರಾಜಪಕ್ಸ ಅವರು ದೇಶದ ಜನತೆಗೆ ಕರೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.