ADVERTISEMENT

ಜುಲೈ 21ರಂದು ಭಾರತಕ್ಕೆ ಶ್ರೀಲಂಕಾ ಅಧ್ಯಕ್ಷರ ಭೇಟಿ

ಪಿಟಿಐ
Published 9 ಜುಲೈ 2023, 11:05 IST
Last Updated 9 ಜುಲೈ 2023, 11:05 IST
ರಾನಿಲ್‌ ವಿಕ್ರಮಸಿಂಘೆ
ರಾನಿಲ್‌ ವಿಕ್ರಮಸಿಂಘೆ   

ಕೊಲಂಬೊ: ಶ್ರೀಲಂಕಾದ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಜುಲೈ 21ರಿಂದ ಎರಡು ದಿನ ಭಾರತ ಪ್ರವಾಸ ಕೈಗೊಳ್ಳುವರು. ಈ ಅವಧಿಯಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಇದು ವಿಕ್ರಮಸಿಂಘೆ ಅವರ ಮೊದಲ ಭಾರತ ಭೇಟಿ. ದ್ವೀಪರಾಷ್ಟ್ರವು ಆರ್ಥಿಕ ಸಂಕಷ್ಟಕ್ಕೀಡಾದ ನಂತರ ಗೋಟಬಯ ರಾಜಪಕ್ಸ ಅವರು ಪದಚ್ಯುತಿಗೊಂಡಿದ್ದು, ಬಳಿಕ ತೆರವಾದ ಸ್ಥಾನದಲ್ಲಿ ವಿಕ್ರಮಸಿಂಘೆ ಅಧ್ಯಕ್ಷರಾಗಿ ನೇಮಕವಾಗಿದ್ದರು. 

ಭೇಟಿ ಅವಧಿಯಲ್ಲಿ ವಿಕ್ರಮಸಿಂಘೆ ಅವರು ಇಂಧನ, ವಿದ್ಯುತ್, ಕೃಷಿ ಸೇರಿದಂತೆ ದ್ವೀಪರಾಷ್ಟ್ರಕ್ಕೆ ಸಂಬಂಧಿಸಿದ ಅನೇಕ ಭಾರತೀಯ ಯೋಜನೆಗಳ ಜಾರಿಗೆ ಒತ್ತು ನೀಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ವಿಕ್ರಮಸಿಂಘೆ ಅವರ ಭೇಟಿ ಹಿನ್ನೆಲೆಯಲ್ಲಿ ಸಿದ್ಧತೆಗಳಿಗೆ ಅಂತಿಮ ರೂಪ ನೀಡಲು ಭಾರತದ ವಿದೇಶಾಂಗ ಕಾರ್ಯದರ್ಶಿ ವಿನಯ್‌ ಮೋಹನ್‌ ಕ್ವಾತ್ರಾ ಅವರು ಮುಂದಿನ ವಾರ ಕೊಲಂಬೊಗೆ ಭೇಟಿ ನೀಡುವರು ಎಂದು ಸ್ಥಳೀಯ ದಿನಪತ್ರಿಕೆ ಡೈಲಿ ಮಿರರ್‌ ವರದಿ ಮಾಡಿದೆ.

ಮೀನುಗಾರಿಕೆ ಸಚಿವ ಡೌಗ್ಲಸ್ ದೇವಾನಂದ, ಇಂಧನ ಸಚಿವ ಕಂಚನ ವಿಜೇಶೇಖರ, ವಿದೇಶಾಂಗ ವ್ಯವಹಾರಗಳ ಸಚಿವ ಅಲಿ ಸ್ಯಾಬ್ರಿ, ಅಧ್ಯಕ್ಷರ ಸಿಬ್ಬಂದಿಯ ಮುಖ್ಯಸ್ಥ ಸಗಲ ರತ್ನಾಯಕೆ ಅವರೂ ಅಧ್ಯಕ್ಷರ ಜೊತೆಗೆ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ವರದಿ ತಿಳಿಸಿದೆ.

15 ಭಾರತೀಯ ಮೀನುಗಾರರ ಬಂಧನ

ಕೊಲಂಬೊ: ಶ್ರೀಲಂಕಾದ ನೌಕಾಪಡೆ ಸಿಬ್ಬಂದಿಯು ದೇಶದ ಕಡಲಗಡಿಯಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ ಆರೋಪದಡಿ 15 ಮಂದಿ ಭಾರತೀಯ ಮೀನುಗಾರರನ್ನು ಬಂಧಿಸಿದ್ದಾರೆ. ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆಯು ವಿಶೇಷ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಮೀನುಗಾರಿಕೆಯಲ್ಲಿ ತೊಡಗಿದ್ದ ಮೀನುಗಾರರನ್ನು ಜುಲೈ 8ರ ರಾತ್ರಿ ಬಂಧಿಸಿತು ಎಂದು ನೌಕಾಪಡೆಯು ಹೇಳಿಕೆಯಲ್ಲಿ ತಿಳಿಸಿತು. ಮೀನುಗಾರಿಕೆಗೆ ಬಳಸಿದ್ದ ಬಲೆಯನ್ನು ಜಪ್ತಿ ಮಾಡಿದ್ದು ಬಂಧಿತ ಮೀನುಗಾರರನ್ನು ಕಂಕೆಸಂತೂರೈ ಹಡಗು ನೆಲೆಗೆ ಕರೆತಂದಿದ್ದು ಮೈಲಾಡಿ ಮೀನುಗಾರಿಕೆ ಇನ್‌ಸ್ಪೆಕ್ಟರ್ ಅವರ ಸುಪರ್ದಿಗೆ ಒಪ್ಪಿಸಲಾಗಿದೆ. ಕಳೆದ ತಿಂಗಳು ನೌಕಾಪಡೆಯು ತಮಿಳುನಾಡಿನ 22 ಮೀನುಗಾರರನ್ನು ಅಕ್ರಮ ಮೀನುಗಾರಿಕೆ ಆರೋಪದಡಿ ಬಂಧಿಸಿತ್ತು. ಅಕ್ರಮ ಮೀನುಗಾರಿಕೆ ಆರೋಪ ಭಾರತ ಮತ್ತು ಶ್ರಿಲಂಕಾ ನಡುವಣ ನಿರಂತರವಾಗಿ ಉಳಿದಿರುವ ವಿವಾದವಾಗಿದೆ.

‘ಆರ್ಥಿಕ ನೆರವಿನಲ್ಲಿ ನಿರ್ಣಾಯಕ ಪಾತ್ರ‘

ಕೊಲಂಬೊ: ಶ್ರೀಲಂಕಾವು ಆರ್ಥಿಕ ಸಂಕಷ್ಟದಿಂದ ಹೊರಬರಲು ಭಾರತ ಅಗತ್ಯ ನೆರವು ನೀಡಲಿದ್ದು ಈ ಪ್ರಕ್ರಿಯೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಭಾರತ ಪುನರುಚ್ಚರಿಸಿದೆ. ಇಲ್ಲಿ ನಡೆದ ನಿರ್ಮಾಣ ಇಂಧನ ಮತ್ತು ವಿದ್ಯುತ್‌ ಕ್ಷೇತ್ರದ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಭಾರತದ ಡೆಪ್ಯುಟಿ ಹೈ ಕಮಿಷನರ್ ವಿನೋದ್ ಕೆ. ಜಾಕೊಬ್ ಈ ಭರವಸೆ ನೀಡಿದರು. ಉಭಯ ದೇಶಗಳ ನಡುವಣ ಮೈತ್ರಿ ಕುರಿತ ಬೆಳವಣಿಗೆಗಳು ಬಾಂಧವ್ಯ ಗಟ್ಟಿಗೊಳಿಸಿವೆ. ಶ್ರೀಲಂಕಾಗೆ ಆರ್ಥಿಕ ನೆರವು ನೀಡಿದ ಮೊದಲ ರಾಷ್ಟ್ರ ಭಾರತ. ಐಎಂಎಫ್‌ ನೆರವು ದೊರಕಿಸುವಲ್ಲಿಯೂ ಪ್ರಧಾನ ಪಾತ್ರ ವಹಿಸಲಿದೆ ಎಂದು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.