ADVERTISEMENT

ಭಾರತದೊಂದಿಗೆ ಬಾಂಧವ್ಯ ಬಯಸುತ್ತೇವೆ: ಶ್ರೀಲಂಕಾದ ನೂತನ ಪ್ರಧಾನಿ ವಿಕ್ರಮಸಿಂಘೆ

ಪಿಟಿಐ
Published 13 ಮೇ 2022, 4:20 IST
Last Updated 13 ಮೇ 2022, 4:20 IST
ರನಿಲ್‌ ವಿಕ್ರಮಸಿಂಘೆ
ರನಿಲ್‌ ವಿಕ್ರಮಸಿಂಘೆ    

ಕೊಲಂಬೊ: ತಮ್ಮ ಅಧಿಕಾರಾವಧಿಯಲ್ಲಿ ಭಾರತದೊಂದಿಗೆ ಉತ್ತಮ ಸಂಬಂಧವನ್ನು ನಿರೀಕ್ಷಿಸಿರುವುದಾಗಿ ಶ್ರೀಲಂಕಾದ ಹೊಸ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಹೇಳಿದ್ದಾರೆ. ಜತೆಗೆ ಸಂಕಷ್ಟದ ಪರಿಸ್ಥಿತಿಯಲ್ಲಿ ನೆರವಾದ ಭಾರತಕ್ಕೆ ಅವರು ಧನ್ಯವಾದ ಅರ್ಪಿಸಿದ್ದಾರೆ.

73ರ ಹರೆಯದ ವಿಕ್ರಮಸಿಂಘೆ ಅವರು ಗುರುವಾರ ಶ್ರೀಲಂಕಾದ 26ನೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸಾಲದ ಸುಳಿಯಲ್ಲಿ ಸಿಲುಕಿರುವ ದೇಶದ ಆರ್ಥಿಕತೆಯನ್ನು ಸ್ಥಿರಗೊಳಿಸುವ ಮತ್ತು ರಾಜಕೀಯ ಪ್ರಕ್ಷುಬ್ಧತೆಗೆ ಅಂತ್ಯ ಹಾಡುವ ಭಾಗವಾಗಿ ಶ್ರೀಲಂಕಾದಲ್ಲಿ ಈ ಮಹತ್ವದ ಬೆಳವಣಿಗೆ ನಡೆದಿದೆ.

‘ನಮಗೆ ಭಾರತದೊಂದಿಗೆ ಬಾಂಧವ್ಯ ಅಗತ್ಯವಿದೆ. ನಾನು ಪ್ರಧಾನಿ (ನರೇಂದ್ರ) ಮೋದಿಗೆ ಧನ್ಯವಾದ ಹೇಳಲು ಬಯಸುತ್ತೇನೆ’ ಎಂದು ವಿಕ್ರಮಸಿಂಘೆ ಹೇಳಿದರು. ಅಲ್ಲದೆ, ಭಾರತದ ಆರ್ಥಿಕ ನೆರವನ್ನು ಸ್ಮರಿಸಿದರು.

ADVERTISEMENT

ಭಾರತವು ಈ ವರ್ಷದ ಜನವರಿಯಿಂದ ಈ ವರೆಗೆ ಶ್ರೀಲಂಕಾಕ್ಕೆ ಹಲವು ರೂಪಗಳಲ್ಲಿ 3 ಶತಕೋಟಿ ಡಾಲರ್‌ (₹23 ಸಾವಿರ ಕೋಟಿ) ಗಿಂತಲೂ ಹೆಚ್ಚು ನೆರವು ನೀಡಿದೆ.

ಪ್ರಜಾಸತ್ತಾತ್ಮಕವಾಗಿ ರಚನೆಯಾದ ಶ್ರೀಲಂಕಾದ ಹೊಸ ಸರ್ಕಾರದೊಂದಿಗೆ ಕೆಲಸ ಮಾಡಲು ಸಿದ್ಧವಿರುವುದಾಗಿ ಭಾರತ ಗುರುವಾರ ಹೇಳಿದೆ. ದ್ವೀಪ ರಾಷ್ಟ್ರದ ಜನರ ಬಗೆಗಿನ ಭಾರತದ ಬದ್ಧತೆ ಮುಂದುವರಿಯಲಿದೆ ಎಂದೂ ಹೇಳಿತ್ತು.

ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಪ್ರಧಾನಿ ವಿಕ್ರಮಸಿಂಘೆ, ಆರ್ಥಿಕ ಬಿಕ್ಕಟ್ಟನ್ನು ನಿವಾರಿಸುವುದರ ಕಡೆಗಷ್ಟೇ ತಮ್ಮ ಗಮನ ಎಂದು ಎಂದು ಹೇಳಿದರು.

‘ಜನರಿಗೆ ಪೆಟ್ರೋಲ್, ಡೀಸೆಲ್ ಮತ್ತು ವಿದ್ಯುತ್ ಪೂರೈಕೆಯನ್ನು ಖಾತ್ರಿಪಡಿಸಲು ಬಯಸುತ್ತೇನೆ’ ಎಂದು ವಿಕ್ರಮಸಿಂಘೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.