ADVERTISEMENT

ಲಾಹೋರ್: ದಾತಾ ದರ್ಬಾರ್ ಹೊರಗೆ ಆತ್ಮಾಹುತಿ ಬಾಂಬ್ ದಾಳಿ; 9 ಸಾವು

ಪಿಟಿಐ
Published 8 ಮೇ 2019, 7:25 IST
Last Updated 8 ಮೇ 2019, 7:25 IST
ಕೃಪೆ:ಟ್ವಿಟರ್
ಕೃಪೆ:ಟ್ವಿಟರ್   

ಲಾಹೋರ್:ಲಾಹೋರ್‌ನಲ್ಲಿರುವ ಸೂಫಿ ದೇವಾಲಯದ ಹೊರಗೆ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಐವರು ಪೊಲೀಸರು ಸೇರಿದಂತೆ 9 ಮಂದಿ ಸಾವಿಗೀಡಾಗಿದ್ದಾರೆ. ಈ ಘಟನೆಯಲ್ಲಿ25 ಮಂದಿಗೆ ಗಾಯಗಳಾಗಿವೆ ಎಂದು ಪಾಕಿಸ್ತಾನಿ ಪೊಲೀಸರು ಹೇಳಿದ್ದಾರೆ.

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರಪಂಜಾಬ್ ಪ್ರಾಂತ್ಯದಲ್ಲಿರುವ ದಾತಾ ದರ್ಬಾರ್‌ನ ಗೇಟ್ 2ರ ಬಳಿ ಬೆಳಗ್ಗೆ 8.45ಕ್ಕೆ ಬಾಂಬ್ ಸ್ಫೋಟವಾಗಿದೆ.

ಇದು ಆತ್ಮಾಹುತಿ ದಾಳಿಯಾಗಿದ್ದು, ದಾತಾ ದರ್ಬಾರ್ ಹೊರಗಡೆ ಇದ್ದ ಸಶಸ್ತ್ರ ಪಡೆಯ ವಾಹನವನ್ನು ಗುರಿಯಾಗಿರಿಸಿ ಆತ್ಮಾಹುತಿ ದಾಳಿ ನಡೆದಿದೆ ಎಂದು ಪಂಜಾಬ್ ಐಜಿಪಿ ಆರಿಫ್ ನವಾಜ್ ಹೇಳಿದ್ದಾರೆ.

ADVERTISEMENT

ಪೊಲೀಸ್ ವಾಹನದ ಬಳಿ ಬಂದ ಆತ್ಮಾಹುತಿ ದಾಳಿಕೋರ, ಬಾಂಬ್ ಸ್ಫೋಟಿಸಿಕೊಂಡು 5 ಪೊಲೀಸರ ಹತ್ಯೆ ನಡೆಸಿದ್ದಾನೆ.ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ಈ ದಾಳಿಯಲ್ಲಿ ಓರ್ವ ಸೆಕ್ಯೂರಿಟಿ ಗಾರ್ಡ್ ಮತ್ತು ಇಬ್ಬರು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ.
ಹಲವಾರು ಮಂದಿಗೆ ಗಂಭೀರ ಗಾಯಗಳಾಗಿರುವುದರಿಂದ ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಪಂಜಾಬ್ ಕಾನೂನು ಸಚಿವ ಬಷ್ರತ್ ರಾಜಾ ಹೇಳಿದ್ದಾರೆ.

9 ವ್ಯಕ್ತಿಗಳು ಸಾವಿಗೀಡಾಗಿದ್ದಾರೆ.6 ಮಂದಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರ ಪ್ರಾಣ ಉಳಿಸಲು ನಾವು ಶತಾಯಗತಾಯ ಪ್ರಯತ್ನಿಸುತ್ತಿದ್ದೇವೆ ಎಂದು ಮೆಯೊ ಹಾಸ್ಪಿಟಲ್ ಮೆಡಿಕಲ್ ಸೂಪರಿಟೆಂಡೆಂಟ್ ಹೇಳಿದ್ದಾರೆ.

ಏತನ್ಮಧ್ಯೆ, ದಾತಾ ದರ್ಬಾರ್ ಹೊರಗಡೆ ನಡೆದ ಬಾಂಬ್ ದಾಳಿಯನ್ನು ಖಂಡಿಸಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್, ದಾಳಿ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ವರದಿ ಕೇಳಿದ್ದಾರೆ ಎಂದು ರೇಡಿಯೊ ಪಾಕಿಸ್ತಾನ್ ವರದಿ ಮಾಡಿದೆ.

ದಾಳಿ ನಂತರ ದಾತಾ ದರ್ಬಾರ್‌ಗೆ ಪ್ರವೇಶ ನಿಷೇಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.