ಮಾರ್ ಎಲಿಯಾಸ್ ಚರ್ಚ್‌ನಲ್ಲಿ ಆತ್ಮಾಹುತಿ ಬಾಂಬ್ ದಾಳಿ
(ರಾಯಿಟರ್ಸ್ ಚಿತ್ರ)
ಬೈರೂತ್: ಸಿರಿಯಾದ ರಾಜಧಾನಿ ಡಮಾಸ್ಕಸ್‌ನ ಚರ್ಚ್‌ನಲ್ಲಿ ಭಾನುವಾರ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 20 ಜನ ಮೃತಪಟ್ಟು, 50ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಡಮಾಸ್ಕಸ್‌ನ ದ್ವೀಲಾದಲ್ಲಿರುವ ಮಾರ್ ಎಲಿಯಾಸ್ ಚರ್ಚ್‌ಗೆ ನುಗ್ಗಿದ ದಾಳಿಕೋರ ಮೊದಲು ಜನರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾನೆ. ಬಳಿಕ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ ಎಂದು ಸಿರಿಯನ್ ಅಧಿಕಾರಿಗಳು ತಿಳಿಸಿದ್ದಾರೆ.
ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಈ ಘಟನೆ ನಡೆದಿದೆ. ದಾಳಿಯ ಹಿಂದೆ ಇಸ್ಲಾಮಿಕ್ ಸ್ಟೇಟ್ (IS) ಗುಂಪಿನ ಕೈವಾಡವಿದೆ ಎಂದು ಸಿರಿಯಾ ಹೇಳಿದೆ.
ಡಿಸೆಂಬರ್(2024)ನಲ್ಲಿ ಇಸ್ಲಾಮಿಸ್ಟ್ ನೇತೃತ್ವದ ಪಡೆಗಳು ದೀರ್ಘಕಾಲದ ಆಡಳಿತಗಾರ ಬಶರ್ ಅಲ್-ಅಸ್ಸಾದ್ ನನ್ನು ಪದಚ್ಯುತಗೊಳಿಸಿದ ಬಳಿಕ ರಾಜಧಾನಿ ಡಮಾಸ್ಕಸ್‌ನಲ್ಲಿ ನಡೆದ ಮೊದಲ ಆತ್ಮಾಹುತಿ ಬಾಂಬ್ ದಾಳಿ ಇದಾಗಿದೆ.
ಭಾನುವಾರ ಚರ್ಚ್‌ನಲ್ಲಿ ನಡೆದ ಭಯಾನಕ ಘಟನೆಯನ್ನು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ. 'ನಾವು ಚರ್ಚ್‌ಗೆ ಹೋದಾಗ, ದ್ವಾರವು ನಾಗರಿಕರು, ಯುವಕರು ಮತ್ತು ವೃದ್ಧರ ದೇಹದ ಭಾಗಗಳಿಂದ ತುಂಬಿತ್ತು' ಎಂದು 35 ವರ್ಷದ ಮೆಲೇಷಿಯಸ್ ಶತಾಹಾ ಎಂಬುವವರು ಹೇಳಿದ್ದಾರೆ.
ನಾನು ಚರ್ಚ್‌ನ ದ್ವಾರದಲ್ಲಿದ್ದೆ. ದುಷ್ಕರ್ಮಿ ಗುಂಡು ಹಾರಿಸುವುದನ್ನು ನೋಡಿದೆ ಎಂದು ಹತ್ತಿರದಲ್ಲಿ ಕೆಲಸ ಮಾಡುತ್ತಿದ್ದ 55 ವರ್ಷದ ಎಲೀ ಟ್ಯಾಟ್ರೋಸ್ ಹೇಳಿದ್ದಾರೆ. ನನ್ನ ಮಗ ಒಳಗೆ ಹಾರಿ ಅವನನ್ನು ತಡೆಯಲು ಬಯಸಿದ. ಆದರೆ ನಾನು ಅವನನ್ನು ತಡೆದೆ. ನಮ್ಮ ಮುಂದೆಯೇ ಬೆಂಕಿ ಆವರಿಸುತ್ತಿತ್ತು. ಜನ ಎಲ್ಲೆಡೆ ಓಡಲು ಆರಂಭಿಸಿದರು ಎಂದು ಅವರು ಹೇಳಿದ್ದಾರೆ.
ಆ್ಯಂಬುಲೆನ್ಸ್‌ಗಳು ಮತ್ತು ಸ್ಥಳೀಯ ನಿವಾಸಿಗಳು ನೆರವಿಗೆ ಧಾವಿಸಿದ್ದಾರೆ. ದಾಳಿಕೋರನೊಂದಿಗೆ ಒಬ್ಬರಿಗಿಂತ ಹೆಚ್ಚಿನ ವ್ಯಕ್ತಿಗಳು ಇದ್ದದ್ದನ್ನು ನೋಡಿರುವುದಾಗಿ ಕೆಲವು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಆದರೆ ಸಿರಿಯನ್ ಅಧಿಕಾರಿಗಳು ಈ ವಿಚಾರವನ್ನು ಇನ್ನೂ ದೃಢಪಡಿಸಿಲ್ಲ.
ಭದ್ರತಾ ಪಡೆಗಳು ಆ ಪ್ರದೇಶವನ್ನು ಸಂಪೂರ್ಣವಾಗಿ ಸುತ್ತುವರೆದಿವೆ. ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.