ಬಾಂಗ್ಲಾದೇಶ ರಾಷ್ಟ್ರೀಯವಾದಿ ಪಕ್ಷದ (ಬಿಎನ್‌ಇ) ಕಾರ್ಯಕರ್ತರು ಮಧ್ಯಂತರ ಸರ್ಕಾರದ ವಿರುದ್ಧ ಬುಧವಾರ ಢಾಕಾದಲ್ಲಿ ಪ್ರತಿಭಟನೆ ನಡೆಸಿದರು
ಢಾಕಾ: ಬಾಂಗ್ಲಾದೇಶದಲ್ಲಿನ ಮಧ್ಯಂತರ ಸರ್ಕಾರದ ವಿರುದ್ಧ ಅಸಮಾಧಾನ ಹೆಚ್ಚಾಗುತ್ತಿದ್ದು, ಸಹಸ್ರಾರು ವಿದ್ಯಾರ್ಥಿಗಳು ಮತ್ತು ಯುವ ಜನರು ಬಾಂಗ್ಲಾದೇಶ ರಾಷ್ಟ್ರೀಯವಾದಿ ಪಕ್ಷದ (ಬಿಎನ್‌ಪಿ) ನೇತೃತ್ವದಲ್ಲಿ ಬುಧವಾರ ಢಾಕಾದಲ್ಲಿ ರ್‍ಯಾಲಿ ನಡೆಸಿದರು.
ಮಾಜಿ ಪ್ರಧಾನಿ ಖಲೀದಾ ಜಿಯಾ ನೇತೃತ್ವದ ಬಿಎನ್‌ಪಿಯ ಕಾರ್ಯಕರ್ತರು, ವಿದ್ಯಾರ್ಥಿಗಳು ಪಕ್ಷದ ಪ್ರಧಾನ ಕಚೇರಿಯ ಹೊರಗಿನ ಬೀದಿಗಳಲ್ಲಿ ಜಮಾಯಿಸಿ ಪ್ರತಿಭಟಿಸಿದರು.
ಮಧ್ಯಂತರ ಸರ್ಕಾರದ ನಾಯಕ ಮುಹಮ್ಮದ್ ಯೂನಸ್ ಅವರು ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ ಬಳಿಕ ಮತ್ತು ಡಿಸೆಂಬರ್‌ನಲ್ಲಿ ಚುನಾವಣೆ ನಡೆಸಲು ಸೇನಾ ಮುಖ್ಯಸ್ಥರು ಬೆಂಬಲ ವ್ಯಕ್ತಪಡಿಸಿದ ಬೆನ್ನಲ್ಲೆ ಈ ಪ್ರತಿಭಟನಾ ರ್‍ಯಾಲಿ ನಡೆದಿದೆ.
ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಜಿಯಾ, ನಾಲ್ಕು ತಿಂಗಳು ಲಂಡನ್‌ನಲ್ಲಿ ಚಿಕಿತ್ಸೆ ಪಡೆದ ಬಳಿಕ ಇತ್ತೀಚೆಗಷ್ಟೇ ಬಾಂಗ್ಲಾಕ್ಕೆ ಮರಳಿದ್ದಾರೆ. ಇದರ ಬೆನ್ನಲ್ಲೇ ಬಿಎನ್‌ಪಿ, ಚುನಾವಣೆ ನಡೆಸುವಂತೆ ಮಧ್ಯಂತರ ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ.
ಬಾಂಗ್ಲಾದಲ್ಲಿ 2024ರ ಆಗಸ್ಟ್‌ನಲ್ಲಿ ಕ್ಷಿಪ್ರಕ್ರಾಂತಿ ನಡೆದು, ಶೇಖ್ ಹಸೀನಾ ಅವರ ಸರ್ಕಾರ ಪತನಗೊಂಡ ನಂತರ ಯೂನಸ್ ಅವರು ಮುಖ್ಯ ಸಲಹೆಗಾರರಾಗಿ ನೇಮಕವಾಗಿದ್ದರು. ಹಸೀನಾ ಅವರು ಸದ್ಯ ಭಾರತದ ಆಶ್ರಯದಲ್ಲಿದ್ದಾರೆ. ಅವರ ಪಕ್ಷವಾದ ಅವಾಮಿ ಲೀಗ್ ಅನ್ನು ಮಧ್ಯಂತರ ಸರ್ಕಾರ ನಿಷೇಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.