ADVERTISEMENT

ಷಿಕಾಗೊದಲ್ಲಿ ಭಾರತೀಯ ಸಂಜಾತೆ ನಿಗೂಢ ಸಾವು: ಶವಪರೀಕ್ಷೆಯಲ್ಲಿ ಸಿಗದ ನಿಖರ ಮಾಹಿತಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2020, 12:05 IST
Last Updated 18 ಜನವರಿ 2020, 12:05 IST
ಸುರೇಲ್‌ ಡಾಬಾವಾಲಾ
ಸುರೇಲ್‌ ಡಾಬಾವಾಲಾ   

ಷಿಕಾಗೊ: ಷಿಕಾಗೊದ ಇಲಿನಾಯ್‌ನಲ್ಲಿ ನಿಗೂಢವಾಗಿ ಸಾವಿಗೀಡಾಗಿರುವ ಭಾರತೀಯ ಸಂಜಾತೆ ಸುರೇಲ್‌ ಡಾಬಾವಾಲಾ ಅವರ ಮರಣೋತ್ತರ ಪರೀಕ್ಷೆ ನಡೆದಿದೆಯಾದರೂ, ಸಾವು ಹೇಗೆ ಸಂಭವಿಸಿತು ಎಂಬುದರ ಕುರಿತು ಸ್ಪಷ್ಟನಿರ್ಣಯಕ್ಕೆ ಬರಲು ಸಾಧ್ಯವಾಗಿಲ್ಲ.

34 ವರ್ಷ ಪ್ರಾಯದ ಸುರೇಲ್‌ ಡಾಬಾವಾಲಾ ಡಿ. 30ರಂದು ಕಾಣೆಯಾಗಿದ್ದರು. ಈ ಕುರಿತು ಕುಟುಂಬಸ್ಥರು ದೂರು ದಾಖಲಿಸಿದ್ದರು. ತೀವ್ರ ಹುಡುಕಾಟದ ನಂತರ ಖಾಸಗಿ ತನಿಖಾ ಸಂಸ್ಥೆಯು ಸುರೇಲ್‌ ಅವರ ಕಾರಿನ ಡಿಕ್ಕಿಯಲ್ಲೇ ಅವರ ಶವ ಪತ್ತೆ ಹಚ್ಚಿತ್ತು. ಮೃತದೇಹವನ್ನು ಬ್ಲಾಂಕೇಟ್‌ನಿಂದ ಸುತ್ತಿಡಲಾಗಿತ್ತು.

ಸುರೇಲ್‌ ಅವರ ಸಾವು ಹೇಗಾಯಿತು ಎಂಬುದರ ಬಗ್ಗೆ ಶವಪರೀಕ್ಷೆಯಲ್ಲಿ ನಿಖರ ಮಾಹಿತಿ ಲಭ್ಯವಾಗಿಲ್ಲ. ಹೀಗಾಗಿ ಮುಂದಿನ ತನಿಖೆ ಕುತೂಹಲ ಕೆರಳಿಸಿದೆ. ಈ ಕುರಿತು ಅಧಿಕಾರಿಗಳ ಮಾಹಿತಿ ಉಲ್ಲೇಖಿಸಿ ‘ಇಂಡಿಯಾ ವೆಸ್ಟ್‌’ ಪತ್ರಿಕೆ ವರದಿ ಮಾಡಿದೆ.

ADVERTISEMENT

ಪ್ರಕರಣದ ಬಗ್ಗೆ ಮಾತನಾಡಿರುವ ಷಿಕಾಗೊ ಪೊಲೀಸರು, ‘ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಪತ್ತೆಯಾಗಿಲ್ಲ,’ ಎಂದಿದ್ದಾರೆ. ಅಲ್ಲದೆ, ಆಕೆಯ ಶವ ಆಕೆಯದ್ದೇ ಕಾರಿಗೆ ಬಂದಿದ್ದಾದರೂ ಹೇಗೆ ಎಂಬುದರ ಬಗ್ಗೆ ಅನುಮಾನಗಳು ಮೂಡಿವೆ ಎಂದಿದ್ದಾರೆ. ಹೀಗಾಗಿ ತನಿಖೆಗೆ ಸಹಕರಿಸುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಸುರೇಲ್‌ ಡಾಬಾವಾಲಾ ಅವರು ಚಿಕಾಗೋದ ಶಾಂಬರ್ಗ್‌ನ ಖ್ಯಾತ ವೈದ್ಯ ಆಶ್ರಫ್‌ ಡಾಬಾವಾಲ ಅವರ ಪುತ್ರಿ. ಅಶ್ರಫ್‌ ಅವರು ಗುಜರಾತ್‌ ಮೂಲದವರು.

ಪುತ್ರಿ ಕಾಣೆಯಾದ ಹಿನ್ನೆಲೆಯಲ್ಲಿ ಆಕೆಯನ್ನು ಪತ್ತೆ ಮಾಡಿಕೊಟ್ಟವರಿಗೆ 10 ಸಾವಿರ ಡಾಲರ್‌ಗಳನ್ನು ನೀಡುವುದಾಗಿ ಅಶ್ರಫ್‌ ಡಾಬಾವಾಲಾ ಅವರು ಘೋಷಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.