ADVERTISEMENT

ಕೊಲೆಯಾದ ಕುಟುಂಬದೊಂದಿಗೆ ಶಂಕಿತ ಆರೋಪಿ ಕೆಲಸ ಮಾಡಿದ್ದ: ಅಮೆರಿಕ ಪೊಲೀಸ್‌

ಪಿಟಿಐ
Published 7 ಅಕ್ಟೋಬರ್ 2022, 10:56 IST
Last Updated 7 ಅಕ್ಟೋಬರ್ 2022, 10:56 IST
ಅಮೆರಿಕದಲ್ಲಿ ಕೊಲೆಯಾದ ಭಾರತೀಯ ಮೂಲದ ಕುಟುಂಬ
ಅಮೆರಿಕದಲ್ಲಿ ಕೊಲೆಯಾದ ಭಾರತೀಯ ಮೂಲದ ಕುಟುಂಬ   

ನ್ಯೂಯಾರ್ಕ್: ಅಮೆರಿಕದ ಮರ್ಸಿಡ್ ನಗರದಲ್ಲಿನ ಪಂಜಾಬ್‌ ಮೂಲದ ಒಂದೇ ಕುಟುಂಬದ 4 ಮಂದಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಶಂಕಿತ ಆರೋಪಿ ಈ ಹಿಂದೆ ಅದೇ ಕುಟುಂಬದೊಂದಿಗೆ ಕೆಲಸ ಮಾಡಿದ್ದ ಎಂದು ಅಮೆರಿಕದ ಪೊಲೀಸರು ಹೇಳಿದ್ದಾರೆ.

ಕ್ಯಾಲಿಫೋರ್ನಿಯಾದ ಮರ್ಸಿಡ್ ಕೌಂಟಿಯ ತೋಟವೊಂದರಲ್ಲಿ 8 ತಿಂಗಳ ಮಗು ಸೇರಿದಂತೆ ಕುಟುಂಬದ 4 ಮೃತದೇಹಗಳು ಪತ್ತೆಯಾಗಿತ್ತು. ‘ಗುರುವಾರ ಶಂಕಿತ ಆರೋಪಿ ಜೀಸಸ್‌ ಮ್ಯಾನುವಲ್‌ ಸಲ್ಗಾಡೊನನ್ನು ಬಂಧಿಸಿ ಮರ್ಸಿಡ್‌ ಕೌನ್ಸಿಲ್‌ ಜೈಲಿಗೆ ಕಳುಹಿಸಲಾಗಿದೆ. ಈತ ಕೊಲೆಯಾದ ಜಸ್‌ಪ್ರೀತ್‌ ಅವರ ಟ್ರಕ್ಕಿಂಗ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಯಾನ್ ಫ್ರಾನ್ಸಿಸ್ಕೊದ ಆಗ್ನೇಯದಲ್ಲಿರುವ ಸ್ಯಾನ್ ಜೋಕ್ವಿನ್ ವ್ಯಾಲಿಯಲ್ಲಿರುವ ಮರ್ಸಿಡ್‌ನಲ್ಲಿ ಸೋಮವಾರ 8 ತಿಂಗಳ ಮಗು ಅರೂಹಿ ಧೇರಿ, ಆಕೆಯ ಪೋಷಕರು ಮತ್ತು ಚಿಕ್ಕಪ್ಪನನ್ನು ಅವರ ಉದ್ಯಮದ ಸ್ಥಳದಿಂದ ಅಪಹರಿಸಲಾಗಿತ್ತು. ಅಪಹರಣ ಮಾಡಿದ್ದ ವ್ಯಕ್ತಿಯ ಕಣ್ಗಾವಲು ವಿಡಿಯೊವನ್ನು ಅಧಿಕಾರಿಗಳು ಬಿಡುಗಡೆ ಮಾಡಿದ್ದರು.

ADVERTISEMENT

ತನಿಖೆ ಮುಂದುವರಿದಿದ್ದು ಕೊಲೆಯಲ್ಲಿ ಭಾಗಿಯಾದ ಇತರರ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಶಂಕಿತ ಮತ್ತು ಕೊಲೆಯಾದ ಕುಟುಂಬದ ನಡುವೆ ಬಹಳ ಕಾಲದಿಂದ ಬಗೆಹರಿಯದ ಹಳೆ ದ್ವೇಷವಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಪಹರಣ ಮಾಡಿದ ಒಂದು ಗಂಟೆಯೊಳಗೆ ಕುಟುಂಬವನ್ನು ಹತ್ಯೆ ಮಾಡಲಾಗಿದೆ. ಸಲ್ಗಾಡೊ, 2005ರಲ್ಲಿ ಸಶಸ್ತ್ರ ಸಹಿತ ಕಳ್ಳತನದ ಆರೋಪದಲ್ಲಿ ಬಂಧಿತನಾಗಿದ್ದ. 2015ರಲ್ಲಿ ಆತನನ್ನು ಬಿಡುಗಡೆಗೊಳಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.