ಡಮಾಸ್ಕಸ್: ಸಿರಿಯಾದಲ್ಲಿನ ದುರೂಸ್ ಪಂಗಡದ ರಕ್ಷಣೆಗೆ ಇಸ್ರೇಲ್ ಸೇನೆ ದಾಳಿ ಆರಂಭಿಸಿದ ಬೆನ್ನಲ್ಲೇ, ದಕ್ಷಿಣ ಸ್ವೀಡಾ ಪ್ರಾಂತ್ಯದಿಂದ ಸಿರಿಯಾದ ಸರ್ಕಾರಿ ಪಡೆ ವಾಪಾಸ್ಸಾಗಿದೆ.
ದುರೂಸ್ ಪಂಗಡ ಮತ್ತು ಬೆಡೊಯಿನ್ ಬುಡಕಟ್ಟು ಪಂಗಡದ ನಡುವೆ ದಕ್ಷಿಣ ಸ್ವೀಡಾದಲ್ಲಿ ಉಂಟಾದ ಸಂಘರ್ಷ ತಡೆಯಲು ಸಿರಿಯಾ ಸರ್ಕಾರಿ ಪಡೆಯು ಸ್ವೀಡಾ ಪ್ರವೇಶಿಸಿತ್ತು. ಇದರ ಬೆನ್ನಲ್ಲೇ ಇಸ್ರೇಲ್ ಸೇನೆ ಬುಧವಾರ ಡಮಾಸ್ಕಸ್‌ನಲ್ಲಿರುವ ಸಿರಿಯಾದ ರಕ್ಷಣಾ ಸಚಿವಾಲಯವನ್ನು ಗುರಿಯಾಗಿಸಿ ದಾಳಿ ನಡೆಸಿತ್ತು.
‘ಸ್ವೀಡಾದಲ್ಲಿ ಕದನ ವಿರಾಮ ಘೋಷಿಸಲಾಗಿದೆ. ಅಲ್ಲಿನ ಆಂತರಿಕ ಭದ್ರತೆ ಕಾಪಾಡಲು ದುರೂಸ್ ಪಂಗಡದ ಧರ್ಮಗುರುಗಳನ್ನು ನಿಯೋಜಿಸಲಾಗಿದೆ’ ಎಂದು ಸಿರಿಯಾದ ಮಧ್ಯಂತರ ಅಧ್ಯಕ್ಷ ಅಹಮದ್ ಅಲ್ – ಶಾರಾ ಗುರುವಾರ ಹೇಳಿದ್ದಾರೆ.
ಅಮೆರಿಕ, ಟರ್ಕಿ ಮತ್ತು ಅರಬ್ ರಾಷ್ಟ್ರಗಳ ಮಧ್ಯಸ್ಥಿಕೆಯಲ್ಲಿ ದುರೂಸ್ ಮುಖಂಡರು ಮತ್ತು ಸಿರಿಯಾದ ಸರ್ಕಾರಿ ಅಧಿಕಾರಿಗಳ ನಡುವೆ ಮಾತುಕತೆ ನಡೆದು ಸ್ವೀಡಾದಲ್ಲಿ ಕದನ ವಿರಾಮ ಘೋಷಿಸಲಾಗಿತ್ತು.
ದುರೂಸ್ ಪಂಗಡ– ಬೆಡೊಯಿನ್ ಬುಡಕಟ್ಟು ಪಂಗಡದ ನಡುವಿನ ಘರ್ಷಣೆ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ 374 ಜನರು ಮೃತಪಟ್ಟಿದ್ದಾರೆ ಎಂದು ಸಿರಿಯಾದ ಮಾನವ ಹಕ್ಕುಗಳ ಸಂಘಟನೆಯೊಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.