ADVERTISEMENT

ತೈವಾನ್ ಸುತ್ತ ಕಂಡುಬಂದ ಚೀನಾದ 8 ಯುದ್ಧನೌಕೆ, 42 ಫೈಟರ್ ಜೆಟ್‌ಗಳು

ಏಜೆನ್ಸೀಸ್
Published 9 ಏಪ್ರಿಲ್ 2023, 7:15 IST
Last Updated 9 ಏಪ್ರಿಲ್ 2023, 7:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತೈಪೆ: 3 ದಿನಗಳ ಮಿಲಿಟರಿ ತಾಲೀಮು ಆರಂಭಿಸಿರುವ ಚೀನಾದ 8 ಯುದ್ಧನೌಕೆಗಳು ಮತ್ತು 48 ಯುದ್ಧ ವಿಮಾನಗಳು ತೈವಾನ್ ಸುತ್ತ ಕಂಡುಬಂದಿವೆ ಎಂದು ಅಲ್ಲಿನ ರಕ್ಷಣಾ ಸಚಿವಾಲಯ ಹೇಳಿದೆ.

ಚೀನಾದ 29 ಜೆಟ್‌ಗಳು ತೈವಾನ್‌ನ ನೈರುತ್ಯ ಭಾಗದ ವಾಯು ರಕ್ಷಣಾ ವಲಯವನ್ನು ಪ್ರವೇಶಿಸಿವೆ ಎಂದು ಅದು ಹೇಳಿದೆ. ಒಂದು ದಿನದಲ್ಲಿ ಇಷ್ಟು ವಿಮಾನಗಳು ತೈವಾನ್ ವಾಯುಗಡಿ ಪ್ರವೇಶಿಸಿರುವುದು ಇದೇ ಮೊದಲು ಎಂದು ಎಎಫ್‌ಪಿ ವರದಿ ಮಾಡಿದೆ.

ತೈವಾನ್‌ ಅಧ್ಯಕ್ಷರಾದ ಸೈ ಇಂಗ್‌–ವೆನ್, ಲಾಸ್ ಏಂಜಲೀಸ್‌ನಲ್ಲಿ ಅಮೆರಿಕದ ಸಂಸತ್ತಿನ ಸ್ಪೀಕರ್ ಕೆವಿನ್ ಮೆಕಾರ್ಥಿ ಜೊತೆ ಮಾತುಕತೆ ನಡೆಸಿ ಹಿಂದಿರುಗಿದ ಒಂದು ದಿನದ ನಂತರ ಚೀನಾದಿಂದ ಈ ಆಕ್ರಮಣಕಾರಿ ಪ್ರತಿಕ್ರಿಯೆ ಬಂದಿದೆ.

ADVERTISEMENT

ಇತ್ತೀಚಿನ ದಿನಗಳಲ್ಲಿ ತೈವಾನ್, ನಿರಂಕುಶ ವಿಸ್ತರಣಾವಾದವನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಜಾಸತ್ತಾತ್ಮಕ ರಾಷ್ಟ್ರಗಳ ಜೊತೆಗಿನ ಸಹಕಾರ ಅತ್ಯಂತ ಪ್ರಮುಖವಾಗಿದೆ ಎಂದು ಸೈ ಶನಿವಾರ ಹೇಳಿದ್ದಾರೆ.

ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಜಂಟಿಯಾಗಿ ರಕ್ಷಣೆ ಮಾಡುವ ನಿಟ್ಟಿನಲ್ಲಿ ಅಮೆರಿಕ ಮತ್ತು ಇತರ ಸಮಾನಮನಸ್ಕ ದೇಶಗಳ ಜೊತೆ ಕೆಲಸ ಮಾಡುವುದಾಗಿಯೂ ಅವರು ತಿಳಿಸಿದ್ದಾರೆ.

ಚೀನಾದ ಆಕ್ರಮಣವು ಬೆಳಿಗ್ಗೆ 6ರಿಂದ 11ಗಂಟೆ(ಸ್ಥಳೀಯ ಕಾಲಮಾನ) ಒಳಗೆ ನಡೆದಿದೆ ಎಂದು ತೈವಾನ್ ರಕ್ಷಣಾ ಸಚಿವಾಲಯ ಹೇಳಿದೆ.

'ದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಹಾಳುಗೆಡವಲು ಚೀನಾದ ಕಮ್ಯುನಿಸ್ಟ್ ಸರ್ಕಾರವು ಮಿಲಿಟರಿ ಬಳಸಿ ನಮ್ಮ ಮೇಲೆ ಬೆದರಿಕೆ ಹಾಕುತ್ತಿದೆ’ ಎಂದು ತೈವಾನ್ ಟೀಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.