ADVERTISEMENT

ಗಡಿದಾಟಿದ ಚೀನಾದ ವಿಮಾನ, ನೌಕೆಗಳು; ಆಕ್ರಮಣಕ್ಕೆ ತಾಲೀಮು: ತೈವಾನ್ ಆರೋಪ

ಏಜೆನ್ಸೀಸ್
Published 6 ಆಗಸ್ಟ್ 2022, 20:45 IST
Last Updated 6 ಆಗಸ್ಟ್ 2022, 20:45 IST
ಚೀನಾದ ಯುದ್ಧ ವಿಮಾನವೊಂದು ತೈವಾನ್‌ ಸನಿಹದ ಪಿಂಗ್‌ಟನ್‌ ದ್ವೀಪದ ಮೇಲೆ ಶನಿವಾರ ಹಾರಾಟ ನಡೆಸಿತು  –ಎಎಫ್‌ಪಿ ಚಿತ್ರ
ಚೀನಾದ ಯುದ್ಧ ವಿಮಾನವೊಂದು ತೈವಾನ್‌ ಸನಿಹದ ಪಿಂಗ್‌ಟನ್‌ ದ್ವೀಪದ ಮೇಲೆ ಶನಿವಾರ ಹಾರಾಟ ನಡೆಸಿತು –ಎಎಫ್‌ಪಿ ಚಿತ್ರ   

ಬೀಜಿಂಗ್: ಚೀನಾ ಕೈಗೊಂಡಿರುವ ವಿವಿಧ ರೀತಿಯ ಸೇನಾ ಕಸರತ್ತು, ಆಕ್ರಮಣಕ್ಕಾಗಿ ತಾಲೀಮು ನಡೆಸುತ್ತಿರುವ ರೀತಿಯಲ್ಲಿ ಕಾಣಿಸುತ್ತಿದೆ ಎಂದು ತೈವಾನ್ ಶನಿವಾರ ಆರೋಪಿಸಿದೆ.

ಚೀನಾದ ಹಲವು ಯುದ್ಧವಾಹಕ ನೌಕೆಗಳು, ಯುದ್ಧವಿಮಾನಗಳು ತೈವಾನ್ ಕೊಲ್ಲಿಯ ಗಡಿಯನ್ನು ದಾಟಿರುವ ಬೆಳವಣಿಗೆಗಳು ತೈವಾನ್‌ನ ಆತಂಕವನ್ನು ಹೆಚ್ಚಿಸಿದೆ.

ಈ ಬೆಳವಣಿಗೆಯಿಂದ ಜಾಗೃತವಾಗಿರುವ ತೈವಾನ್, ಅಪಾಯವನ್ನುಗ್ರಹಿಸಿದೆ. ಹೀಗಾಗಿ ದ್ವೀಪರಾಷ್ಟ್ರದ ಸುತ್ತಲೂ ತನ್ನ ವಾಯು ಹಾಗೂ ನೌಕಾ ಗಸ್ತು ವಾಹನಗಳನ್ನು ಶನಿವಾರ ನಿಯೋಜಿಸಿದೆ. ನೆಲದಿಂದ ಉಡ್ಡಯನ ಮಾಡಬಲ್ಲ ಸಾಮರ್ಥ್ಯದ ಕ್ಷಿಪಣಿಗಳನ್ನು ಸಕ್ರಿಯ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ತೈವಾನ್‌ ರಕ್ಷಣಾ ಸಚಿವಾಲಯ ತಿಳಿಸಿದೆ.

ADVERTISEMENT

ಚೀನಾಕ್ಕೆ ಸೇರಿದ 20 ವಿಮಾನಗಳು ಹಾಗೂ 14 ನೌಕೆಗಳು ದ್ವೀಪರಾಷ್ಟ್ರವನ್ನು ಸುತ್ತುವರಿದಿವೆ. ಈ ಪೈಕಿ ಕನಿಷ್ಠ 14 ನೌಕೆಗಳು ಮತ್ತು ವಿಮಾನಗಳು ಗಡಿ ರೇಖೆಯನ್ನು ದಾಟಿವೆ ಎಂದು ತೈವಾನ್ ಆರೋಪಿಸಿದೆ.

ಶುಕ್ರವಾರ ತಡರಾತ್ರಿ ಕಿನ್‌ಮನ್‌ ಕೌಂಟಿ ಸಮೀಪದಲ್ಲಿ ಚೀನಾದ್ದು ಎಂದು ನಂಬಲಾದ ನಾಲ್ಕು ಡ್ರೋನ್‌ಗಳ ಹಾರಾಟವನ್ನು ಗುರುತಿಸಿದ್ದಾಗಿ ತೈವಾನ್ ಹೇಳಿದೆ. ಇದಕ್ಕೆ ಪ್ರತಿಯಾಗಿ ಬೆಂಕಿಯ ಕಿಡಿಗಳನ್ನು ಹಾರಿಸಿಎಚ್ಚರಿಕೆ ನೀಡಿದೆ. ದ್ವೀಪಗಳ ಸಮೂಹವಾಗಿರುವ ಕಿನ್‌ಮನ್, ಚೀನಾದ ಪೂರ್ವ ಕರಾವಳಿಯ ನಗರ ಕ್ಸಿಯಾಮನ್‌ನಿಂದ ಕೇವಲ 10 ಕಿಲೋಮೀಟರ್ ದೂರದಲ್ಲಿದೆ.

ಅಮೆರಿಕ ಸಂಸತ್‌ನ ಸ್ಪೀಕರ್ ನ್ಯಾನ್ಸಿ ಪೆಲೋಸಿಅವರು ತೈವಾನ್‌ಗೆಇತ್ತೀಚೆಗೆ ಭೇಟಿ ನೀಡಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಚೀನಾ, ಸೇನಾ ಕಸರತ್ತು ಹಮ್ಮಿಕೊಂಡಿದೆ.

‘ಒಂದು ಚೀನಾ’ ನೀತಿಯನ್ನು ಅಮೆರಿಕ ಉಲ್ಲಂಘಿಸಿದೆ ಎಂದು ಆರೋಪಿಸಿರುವ ಚೀನಾ, ತೈವಾನ್ ದ್ವೀಪವು ತನ್ನದೇ ಭಾಗವಾಗಿದ್ದು, ಅಗತ್ಯಬಿದ್ದರೆ, ಬಲ ಪ್ರಯೋಗಿಸಿ ವಶಕ್ಕೆ ತೆಗೆದುಕೊಳ್ಳುವ ಮನಸ್ಥಿತಿಯಲ್ಲಿದೆ ಎನ್ನಲಾಗಿದೆ.

ಚೀನಾದಿಂದ ಎದುರಾಗಬಹುದಾದ ಇಂತಹ ಯಾವುದೇ ಅಪಾಯಕ್ಕೆ ಪ್ರತಿರೋಧ ಒಡ್ಡಲು ತೈವಾನ್ ತಯಾರಿ ನಡೆಸಿದೆ. ಪ್ರಾದೇಶಿಕ ಅಭದ್ರತೆಯ ಸ್ಥಿತಿ ಉಂಟಾದಲ್ಲಿ, ದೇಶದ ರಕ್ಷಣೆಗೆ ಅಂತರರಾಷ್ಟ್ರೀಯ ಸಮುದಾಯದ ಸಹಕಾರ ಬೇಕು ಎಂದುತೈವಾನ್ ಅಧ್ಯಕ್ಷೆಸಾಯ್‌ ಇಂಗ್‌ ವೆನ್ ಅವರು ಹೇಳಿದ್ದಾರೆ.

ಚೀನಾದ ಸೇನಾ ಕಸರತ್ತು ಗುರುವಾರ ಆರಂಭವಾಗಿದ್ದು, ಭಾನುವಾರ ಕೊನೆಗೊಳ್ಳುವ ನಿರೀಕ್ಷೆಯಿದೆ. ತೈವಾನ್ ಸಹ ಸೇನಾ ಕಸರತ್ತು ನಡೆಸುತ್ತಿದೆ.

ಈ ವಲಯದಲ್ಲಿ ಹಲವು ನೌಕೆಗಳನ್ನು ಅಮೆರಿಕ ನಿಯೋಜಿಸಿದೆ.

‘ಸಂವಹನ ಕಡಿತ ಹೊಣೆಗೇಡಿತನ’

ಅಮೆರಿಕದ ಜೊತೆ ಸಂಪರ್ಕ ಕಡಿದುಕೊಳ್ಳಲು ನಿರ್ಧರಿಸಿರುವ ಚೀನಾದ ನಿರ್ಧಾರ ಬೇಜವಾಬ್ದಾರಿತನದ್ದು ಎಂದುಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಹೇಳಿದ್ದಾರೆ.ತಪ್ಪು ಗ್ರಹಿಕೆಯನ್ನು ತಡೆಯುವುದಕ್ಕಾಗಿಚೀನಾ ಜೊತೆಗಿನ ಎಲ್ಲ ಸಂವಹನ ಮಾರ್ಗಗಳನ್ನು ಅಮೆರಿಕ ಮುಕ್ತವಾಗಿ ಇರಿಸಿದೆ ಎಂದು ಅವರು ಹೇಳಿದ್ದಾರೆ.

‘ನಮ್ಮ ನಡುವಣ ಭಿನ್ನಾಭಿಪ್ರಾಯದಿಂದಾಗಿ ಜಾಗತಿಕ ಕಳಕಳಿಯ ವಿಷಯಗಳಲ್ಲಿ ಚೀನಾ ತನ್ನ ಹೊಣೆಗಾರಿಕೆಯಿಂದ ವಿಮುಖವಾಗಬಾರದು. ಜನರ ಜೀವ ಹಾಗೂ ಬದುಕಿಗೆ ಸಂಬಂಧಿಸಿದ ಮಹತ್ವದ ವಿಚಾರಗಳಲ್ಲಿ ಎರಡೂ ದೇಶಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಹಲವು ದೇಶಗಳು ಬಯಸುವುದು ಸರಿಯಾಗಿಯೇ ಇದೆ’ ಎಂದು ಮನವರಿಕೆ ಮಾಡಿಕೊಡಲು ಬ್ಲಿಂಕನ್ ಯತ್ನಿಸಿದ್ದಾರೆ.

ತೈವಾನ್ ಕ್ಷಿಪಣಿ ಅಧಿಕಾರಿ ಸಾವು

ತೈವಾನ್‌ ಕ್ಷಿಪಣಿ ತಯಾರಿಕೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಓಯಾಂಗ್ ಲಿ–ಸಿಂಗ್ ಎಂಬುವರು ಶನಿವಾರ ಹೃದಯ ಸಂಬಂಧಿ ಸಮಸ್ಯೆಯಿಂದ ಶನಿವಾರ ಮೃತಪಟ್ಟಿದ್ದಾರೆ. ತೈವಾನ್‌ ರಾಷ್ಟ್ರೀಯ ಚುಂಗ್–ಶಾನ್ ವಿಜ್ಞಾನ ಮತ್ತು ತಂತ್ರ‌ಜ್ಞಾನ ಸಂಸ್ಥೆಯ ಉಪಾಧ್ಯಕ್ಷರಾಗಿ ಅವರು ಕೆಲಸ ಮಾಡುತ್ತಿದ್ದರು. ವಿವಿಧ ಕ್ಷಿಪಣಿಗಳ ತಯಾರಿಕೆಯ ಮೇಲ್ವಿಚಾರಣೆ ಜವಾಬ್ದಾರಿಯನ್ನು ಕಳೆದ ವರ್ಷ ಇವರಿಗೆ ವಹಿಸಲಾಗಿತ್ತು.

ಅವರು ದ್ವೀಪರಾಷ್ಟ್ರದ ದಕ್ಷಿಣ ಭಾಗದ ಪಿಂಗ್‌ಟುಂಗ್ ಕೌಂಟಿಗೆ ಕಾರ್ಯನಿಮಿತ್ತ ತೆರಳಿದ್ದಾಗ ಹೋಟೆಲ್‌ನಲ್ಲಿ ಪ್ರಜ್ಞಾಹೀನರಾದರು ಎಂದು ತೈವಾನ್‌ ಸೆಂಟ್ರಲ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ತೈವಾನ್ ಸುತ್ತಲೂ ಚೀನಾ ಸೇನಾ ಕಸರತ್ತು ನಡೆಸುತ್ತಿರುವ ಈ ಸಮಯದಲ್ಲಿ ಹಿರಿಯ ಅಧಿಕಾರಿ ಮೃತಪಟ್ಟಿದ್ದಾರೆ. ಚೀನಾದಿಂದ ಬೆದರಿಕೆ ಹೆಚ್ಚುತ್ತಿರುವ ಕಾರಣ, ತನ್ನದೇ ಸ್ವಂತ ಕ್ಷಿಪಣಿ ತಯಾರಿಕೆ ಪ್ರಕ್ರಿಯೆಯನ್ನು ತೈವಾನ್ ಚುರುಕುಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.