ADVERTISEMENT

ತೈವಾನ್‌ನತ್ತ ಯುದ್ಧ ವಿಮಾನ ರವಾನಿಸಿದ ಚೀನಾ

ಏಜೆನ್ಸೀಸ್
Published 19 ಸೆಪ್ಟೆಂಬರ್ 2020, 10:05 IST
Last Updated 19 ಸೆಪ್ಟೆಂಬರ್ 2020, 10:05 IST
ಯುದ್ಧ ವಿಮಾನ
ಯುದ್ಧ ವಿಮಾನ    

ತೈಪೆ: ಚೀನಾವು ತೈವಾನ್‌ನತ್ತ ಮತ್ತಷ್ಟು ಯುದ್ಧ ವಿಮಾನಗಳನ್ನು ರವಾನಿಸಿದೆ.

ತೈವಾನಿನಲ್ಲಿ ಪ್ರಜಾತಂತ್ರದ ಪತಾಕೆ ಹಾರಿಸಿದ್ದ, ತೈವಾನ್‌ ಮಟ್ಟಿಗೆ ‘ಮಿಸ್ಟರ್‌ ಡೆಮಾಕ್ರಸಿ’ ಎಂದೇ ಕರೆಯಲಾಗುತ್ತಿದ್ದ ಲೀ ಟೆಂಗ್‌ ಹೂ (97) ಅವರಿಗೆ ಶನಿವಾರ ಅಂತಿಮ ಗೌರವ ಸಲ್ಲಿಸಲಾಯಿತು.

ತೈವಾನ್‌ನಿನ ಮೊದಲ ಸ್ಥಳೀಯ ಅಧ್ಯಕ್ಷ ಎಂಬ ಹಿರಿಮೆ ಹೊಂದಿದ್ದ ಲೀ ಅವರು ಜುಲೈ 30ರಂದು ನಿಧನರಾಗಿದ್ದರು. ಅಲೆಥಿಯಾ ಯೂನಿವರ್ಸಿಟಿಯಲ್ಲಿ ಬೆಳಿಗ್ಗೆ ನಡೆದ ಅಂತಿಮ ಸಂಸ್ಕಾರದಲ್ಲಿ ತೈವಾನಿನ ಅಧ್ಯಕ್ಷೆ ತ್ಸೈ ಇಂಗ್‌ ವೆನ್‌, ಅಮೆರಿಕದ ವಿದೇಶಾಂಗ ಇಲಾಖೆಯ ಸಹಾಯಕ ಕಾರ್ಯದರ್ಶಿ ಕೀತ್‌ ಕ್ರಾಚ್‌ ಅವರು ಲೀ ಅವರಿಗೆ ಗೌರವ ನಮನ ಸಲ್ಲಿಸಿದರು.

ಈ ಕಾರ್ಯಕ್ರಮದಲ್ಲಿ ಕೀತ್‌ ಪಾಲ್ಗೊಂಡಿದ್ದರಿಂದ ಕೆರಳಿರುವ ಚೀನಾವು, ತೈವಾನ್‌ ಜಲಸಂಧಿಯ ಮಧ್ಯಭಾಗಕ್ಕೆ ಶುಕ್ರವಾರ 18 ಯುದ್ಧ ವಿಮಾನಗಳನ್ನು ರವಾನಿಸಿತ್ತು.

‘ಶನಿವಾರ ಬೀಜಿಂಗ್‌ನಿಂದ ಮತ್ತೆ 19 ಯುದ್ಧ ವಿಮಾನಗಳನ್ನು ತೈವಾನ್‌ನತ್ತ ರವಾನಿಸಲಾಗಿದೆ. ಇದರಲ್ಲಿ ಎರಡು ಬಾಂಬರ್‌ ವಿಮಾನಗಳೂ ಇವೆ. ನಮ್ಮ ವಾಯುಪಡೆಯು ಚೀನಾದ ಚಟುವಟಿಕೆಗಳ ಮೇಲೆ ನಿಗಾ ಇಡುವ ಸಲುವಾಗಿ ವಾಯು ರಕ್ಷಣಾ ಕ್ಷಿಪಣಿಯನ್ನು ನಿಯೋಜಿಸಿದೆ’ ಎಂದು ತೈವಾನ್‌ನ ರಕ್ಷಣಾ ಸಚಿವಾಲಯ ತಿಳಿಸಿದೆ.

ಲೀ ಅವರು ತೈವಾನ್‌ ದ್ವೀಪರಾಷ್ಟ್ರದಲ್ಲಿ ಸರ್ವಾಧಿಕಾರ ತೊಡೆದುಹಾಕಿ ಪ್ರಜಾಪ್ರಭುತ್ವ ಮಾದರಿ ಆಡಳಿತ ವ್ಯವಸ್ಥೆಯನ್ನು ಸ್ಥಾಪಿಸಿದ್ದರು.

‘ಲೀ ಅವರ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುವ ಗುರುತರವಾದ ಜವಾಬ್ದಾರಿ ನಮ್ಮ ಮೇಲಿದೆ. ಜನರ ಇಚ್ಛಾಶಕ್ತಿಯನ್ನು ಗೌರವಿಸುವ ಮೂಲಕ ತೈವಾನ್‌ಗೆ ಮರು ರೂಪ ನೀಡಲು ಪ್ರಯತ್ನಿಸಬೇಕಿದೆ’ ಎಂದು ತ್ಸೈ ನುಡಿದಿದ್ದಾರೆ.

ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಹಾಗೂ ಟಿಬೆಟಿಯನ್ನರ ಧರ್ಮಗುರು ದಲೈ ಲಾಮಾ ಅವರೂ ಲೀ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.