ADVERTISEMENT

ಅಮೆರಿಕ ನಿರ್ಮಿತ ಶಸ್ತ್ರಾಸ್ತ್ರಗಳನ್ನು ಹಿಡಿದು ತಾಲಿಬಾನಿಗಳ ಪರೇಡ್‌

ಏಜೆನ್ಸೀಸ್
Published 19 ಆಗಸ್ಟ್ 2021, 3:16 IST
Last Updated 19 ಆಗಸ್ಟ್ 2021, 3:16 IST
ತಾಲಿಬಾನ್‌ ಹೋರಾಟಗಾರರು ಗಸ್ತು ತಿರುಗುತ್ತಿರುವುದು–ಸಂಗ್ರಹ ಚಿತ್ರ
ತಾಲಿಬಾನ್‌ ಹೋರಾಟಗಾರರು ಗಸ್ತು ತಿರುಗುತ್ತಿರುವುದು–ಸಂಗ್ರಹ ಚಿತ್ರ   

ವಾಷಿಂಗ್ಟನ್‌: ಅಫ್ಗಾನಿಸ್ತಾನದ ಪ್ರಭುತ್ವ ಸಾಧಿಸಿರುವ ತಾಲಿಬಾನ್‌ ಹೋರಾಟಗಾರರು 'ಅಮೆರಿಕ ನಿರ್ಮಿತ' ಸೇನಾ ಪಡೆಯ ಸಶಸ್ತ್ರ ವಾಹನಗಳಲ್ಲಿ ತಿರುಗುತ್ತಿರುವುದು, ಅಮೆರಿಕ ಪೂರೈಕೆ ಮಾಡಿರುವ ಬಂದೂಕುಗಳನ್ನು ಹಿಡಿದು ಸಾಗುತ್ತಿರುವುದು ವಿಡಿಯೊಗಳಲ್ಲಿ ದಾಖಲಾಗಿದೆ. ಅಫ್ಗನ್‌ ಸರ್ಕಾರದ ಸೇನಾ ಪಡೆಗಳು ಪ್ರತಿರೋಧ ತೋರದೆ ಹಿಂದೆ ಉಳಿಯುತ್ತಿದ್ದಂತೆ ಅಮೆರಿಕದ ಬ್ಲ್ಯಾಕ್‌ ಹಾಕ್‌ ಹೆಲಿಕಾಪ್ಟರ್‌ಗಳ ಮೇಲೂ ತಾಲಿಬಾನಿಗಳು ಹತ್ತಿರುವುದು ಅಮೆರಿಕಕ್ಕೆ ಇರುಸು ಮುರುಸು ತಂದಿದೆ.

ತಿಂಗಳ ಹೋರಾಟದಲ್ಲಿ ತಾಲಿಬಾನಿಗಳು ಸುಲಭವಾಗಿ ಅಫ್ಗಾನಿಸ್ತಾನವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಕಳೆದ 20 ವರ್ಷಗಳಿಂದ ಅಮೆರಿಕ ಪೂರೈಕೆ ಮಾಡಿರುವ ಶಸ್ತ್ರಗಳು, ಸಾಧನಗಳು, ವಾಹನಗಳು, ಯುದ್ಧ ಸಾಮಗ್ರಿಗಳನ್ನು ತಾಲಿಬಾನಿಗಳು ಅಫ್ಗನ್‌ ಸಶಸ್ತ್ರ ಪಡೆಗಳಿಂದ ವಶಕ್ಕೆ ಪಡೆದಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೊ ಮತ್ತು ಫೋಟೊಗಳಲ್ಲಿ ತಾಲಿಬಾಲಿಗಳು ಅಮೆರಿಕದ ಎಂ4 ಮತ್ತು ಎಂ18 ರೈಫಲ್‌ಗಳನ್ನು ಹಿಡಿದಿರುವುದನ್ನು ಕಾಣಬಹುದಾಗಿದೆ. ಎಂ24 ಸ್ನೈಪರ್‌ಗಳನ್ನು ಹಿಡಿದಿದ್ದಾರೆ ಹಾಗೂ ಅಮೆರಿಕ ಸೇನೆ ಬಳಸುವ ಹಮ್ವೀಸ್ ( Humvees) ಮಿಲಿಟರಿ ಟ್ರಕ್‌ಗಳಲ್ಲಿ ಓಡಾಟ ನಡೆಸಿದ್ದಾರೆ. ಅಮೆರಿಕದ ವಿಶೇಷ ಪಡೆಗಳು ಬಳಸುವ ಸಮರ ಸಜ್ಜಿತ ಸಮವಸ್ತ್ರಗಳನ್ನೂ ತಾಲಿಬಾನಿಗಳು ಧರಿಸಿದ್ದಾರೆ.

ADVERTISEMENT

20 ವರ್ಷಗಳ ನಿರಂತರ ಯುದ್ಧದ ಬಳಿಕ ಅಫ್ಗನ್‌ನಿಂದ ಅಮೆರಿಕ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಜೋ ಬೈಡನ್‌ ಎಡವಿದ್ದಾರೆ ಎಂದು ರಾಜಕೀಯ ಟೀಕಾಪ್ರಹಾರಗಳು ನಡೆಯುತ್ತಿವೆ. ಅಮೆರಿಕ ನಿರ್ಮಿತ ವಾಹನಗಳು, ಶಸ್ತ್ರಾಸ್ತ್ರಗಳನ್ನು ತಾಲಿಬಾಲಿಗಳು ಬಳಸುತ್ತಿರುವುದು ಟೀಕಾಕಾರರಿಗೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ. 'ತಾಲಿಬಾನಿಗಳು ಹಿಂದೆಂದಿಗಿಂತಲೂ ಈಗ ಉತ್ತಮ ರೀತಿಯಲ್ಲಿ ಶಸ್ತ್ರ ಸಜ್ಜಿತರಾಗಿದ್ದಾರೆ. ಬೈಡನ್‌ ಅವರ ನಿರ್ಲಕ್ಷ್ಯಯುತ ಸೇನಾ ಹಿಂತೆಗೆತ ಪ್ರಕ್ರಿಯೆಗೆ ಧನ್ಯವಾದಗಳು' ಎಂದು ರಿಪಬ್ಲಿಕನ್‌ ಮುಖಂಡ ರೋನಾ ಮೆಕ್‌ಡ್ಯಾನಿಯಲ್‌ ಮೂದಲಿಸಿದ್ದಾರೆ.

ಕೋಟ್ಯಂತರ ಡಾಲರ್‌ ಹಣ ವ್ಯಯಿಸಿ, ಎರಡು ದಶಕಗಳಿಂದ ಅಫ್ಗನ್‌ ಭದ್ರತಾ ಪಡೆಗಳಿಗೆ ಅಮೆರಿಕ ತರಬೇತಿ ನೀಡಿದ್ದರೂ, ಅಫ್ಗನ್‌ ಪಡೆಗಳಿಂದ ಯಾವುದೇ ಪ್ರತಿರೋಧವನ್ನೂ ಎದುರಿಸದೆಯೇ ತಾಲಿಬಾನಿಗಳು ರಾಜಧಾನಿ ಕಾಬೂಲ್‌ ಅನ್ನು ವಶಕ್ಕೆ ತೆಗೆದುಕೊಂಡರು. ಅನಂತರ ಯುದ್ಧ ಸಾಮಾಗ್ರಿಗಳನ್ನು ಅಫ್ಗನ್‌ ಪಡೆಗಳಿಂದ ತಾಲಿಬಾನಿಗಳು ವಶಕ್ಕೆ ಪಡೆದಿದ್ದಾರೆ.

'ರಕ್ಷಣಾ ಪಡೆಗಳ ಶಸ್ತ್ರಾಸ್ತಗಳ ಸಂಗ್ರಹದ ಬಗ್ಗೆ ಪೂರ್ಣ ಚಿತ್ರಣ ದೊರೆತಿಲ್ಲ. ಆದರೆ, ಸಾಕಷ್ಟು ಪ್ರಮಾಣದಲ್ಲಿ ಅವು ತಾಲಿಬಾನಿಗಳ ಕೈ ಸೇರಿವೆ' ಎಂದು ಶ್ವೇತ ಭವನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್‌ ಸುಲಿವನ್‌ ಹೇಳಿದ್ದಾರೆ.

ಅಧಿಕೃತ ಅಂಕಿಅಂಶಗಳ ಪ್ರಕಾರ, ಅಮೆರಿಕ ಸೇನೆಯಿಂದ ಅಫ್ಗನ್‌ ಸೇನಾ ಪಡೆಗೆ 7,000ಕ್ಕೂ ಅಧಿಕ ಮೆಶಿನ್‌ ಗನ್‌ಗಳು, 4,700 ಹಮ್ವೀಸ್ ವಾಹನಗಳು ಹಾಗೂ 20,000 ಗ್ರೆನೇಡ್‌ಗಳನ್ನು ಇತ್ತೀಚಿನ ವರ್ಷಗಳಲ್ಲಿ ಪೂರೈಕೆ ಮಾಡಲಾಗಿದೆ.

ಇದರೊಂದಿಗೆ ವಾಷಿಂಗ್ಟನ್‌ನಿಂದ 200ಕ್ಕೂ ಹೆಚ್ಚು ಹೆಲಿಕಾಪ್ಟರ್‌ಗಳು ಹಾಗೂ ಇತರೆ ವಿಮಾನಗಳು, ಸ್ಫೋಟಕ ಯಂತ್ರಗಳು ಹಾಗೂ ಡ್ರೋನ್‌ಗಳು ಅಫ್ಗನ್‌ನಲ್ಲಿ ಬಳಕೆಯಲ್ಲಿವೆ. ಆ ಎಲ್ಲದಕ್ಕೂ ಅಮೆರಿಕದಿಂದಲೇ ತಾಂತ್ರಿಕ ನೆರವು ಮತ್ತು ಬಿಡಿ ಭಾಗಗಳ ಪೂರೈಕೆ ಮಾಡಲಾಗಿತ್ತು.

ತಾಲಿಬಾನಿಗಳ ಆಕ್ರಮಣದಿಂದ ತಪ್ಪಿಸಿಕೊಳ್ಳಲು ಅಫ್ಗನ್‌ನ 40 ಮಿಲಿಟರಿ ವಿಮಾನಗಳು ಉಜ್ಬೇಕಿಸ್ತಾನದ ಕಡೆಗೆ ಹಾರಾಟ ನಡೆಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.