ADVERTISEMENT

ಅಫ್ಗಾನಿಸ್ತಾನ: ವಿಜಯದ ಮೆರವಣಿಗೆ ಮೂಲಕ ತಾಲಿಬಾನ್‌ ಶಕ್ತಿ ಪ್ರದರ್ಶನ

ಏಜೆನ್ಸೀಸ್
Published 3 ಅಕ್ಟೋಬರ್ 2021, 10:28 IST
Last Updated 3 ಅಕ್ಟೋಬರ್ 2021, 10:28 IST
ತಾಲಿಬಾನ್ ಬೆಂಬಲಿಗರು ಕಾಬೂಲ್‌ನ ಮೈದಾನದಲ್ಲಿ ನಡೆದ ತಾಲಿಬಾನ್‌ ಬಯಲು ಸಭೆಯಲ್ಲಿ ಭಾಗವಹಿಸಿದರು.(ಎಎಫ್‌ಪಿ ಚಿತ್ರ)
ತಾಲಿಬಾನ್ ಬೆಂಬಲಿಗರು ಕಾಬೂಲ್‌ನ ಮೈದಾನದಲ್ಲಿ ನಡೆದ ತಾಲಿಬಾನ್‌ ಬಯಲು ಸಭೆಯಲ್ಲಿ ಭಾಗವಹಿಸಿದರು.(ಎಎಫ್‌ಪಿ ಚಿತ್ರ)   

ಕೋಹ್ಡಮನ್, ಅಫ್ಗಾನಿಸ್ತಾನ: ಕಾಬೂಲ್‌ನ ಉತ್ತರದಲ್ಲಿನ ವಿಶಾಲ ಮೈದಾನದಲ್ಲಿ 1,500 ಕ್ಕಿಂತ ಹೆಚ್ಚು ತಾಲಿಬಾನ್‌ ಬೆಂಬಲಿಗರು ಭಾನುವಾರ ತಾಲಿಬಾನಿಗಳ ಮೆರವಣಿಗೆಯೊಂದರಲ್ಲಿ ಭಾಗವಹಿಸುವ ಮೂಲಕ ತಾಲಿಬಾನ್‌ ಆಡಳಿವನ್ನು ಸಮರ್ಥಿಸಿಕೊಂಡರು.

ತಾವು ಅಫ್ಗಾನಿಸ್ತಾನದಲ್ಲಿಯ ತಾಲಿಬಾನಿಗಳ ಆಡಳಿತ ಒಪ್ಪಿರುವುದಾಗಿ ಹೇಳಿಕೊಂಡರು.

ಕಾಬೂಲ್‌ನ ಬೆಟ್ಟ ಪ್ರದೇಶದ ಹೊರವಲಯದಲ್ಲಿರುವ ಕೊಹ್ಡಮನ್‌ ನಗರದಲ್ಲಿನ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಮುಖ ತಾಲಿಬಾನ್‌ ಅಧಿಕಾರಿಗಳು ಮತ್ತು ಕಮಾಂಡೊಗಳ ಭಾಷಣ ಆಲಿಸಲು ಪುರುಷರು ಮತ್ತು ಹುಡುಗರು ಕಿಕ್ಕಿರಿದು ಸೇರಿದ್ದರು.

ADVERTISEMENT

ಅಫ್ಗನ್‌ ತನ್ನ ವಶವಾದ ಏಳು ವಾರಗಳ ನಂತರ ತಾಲಿಬಾನ್‌ ನಡೆಸುತ್ತಿರುವ ಮೊದಲ ಮೆರವಣಿಗೆ ಇದಾಗಿದೆ.

ಕಾರ್ಯಕ್ರಮವು ಮುಂದುವರೆದಂತೆ ಹೆಚ್ಚು ಹೆಚ್ಚು ತಾಲಿಬಾನ್‌ ಬೆಂಬಲಗರು ಮೈದಾನದತ್ತ ಹೆಜ್ಜೆ ಹಾಕಿದ್ದರು. ಸುಡು ಬಿಸಿಲಿನಲ್ಲಿಯೂ ನೂರಾರು ಜನರು ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದರು.

ಹಜ್‌ ಮತ್ತು ಧಾರ್ಮಿಕ ವ್ಯವಹಾರಗಳ ಉಪಮುಖ್ಯಮಂತ್ರಿ ಮೌಲವಿ ಮುಸ್ಲಿಂ ಹಕ್ಕಾನಿ ತಾಲಿಬಾನಿಗಳ ವಿಜಯವನ್ನು ಶ್ಲಾಘಿಸಿದರು.

ಈ ವೇಳೆ ಪುರುಷರ ಒಂದು ಗುಂ‍ಪು ಅಮೆರಿಕದ ವಿರುದ್ಧ ಧಿಕ್ಕಾರ ಕೂಗಿತು. ರಾಕೆಟ್‌ ಲಾಂಚರ್‌ಗಳು ಸೇರಿದಂತೆ ಧ್ವಜಗಳು ಮತ್ತು ಆಯುಧಗಳನ್ನು ಹೊತ್ತ ತಾಲಿಬಾನ್‌ ಸೈನಿಕರ ಗುಂಪು ಜನಸಂದಣಿಯ ಸುತ್ತ ಮೆರವಣಿಗೆ ನಡೆಸಿತು.

ಈ ವೇಳೆ ಕೆಲವರು ತಾಲಿಬಾನ್‌ ಬೆಂಬಲಿತ ಪೋಸ್ಟರ್‌ಗಳನ್ನು ಪ್ರದರ್ಶಿಸಿದರು. ಇನ್ನು ಕೆಲವರು ಕೈಗೆ ತಾಲಿಬಾನ್‌ನ ಬಿಳಿ ಮತ್ತು ಕಪ್ಪು ಪಟ್ಟಿಯನ್ನು ಧರಿಸಿದ್ದರು. ಬುಡಕಟ್ಟು ಸಮುದಾಯದವರು ಮೈದಾನದ ಒಂದು ಬದಿಯಲ್ಲಿ ನಿಂತಿದ್ದರು.

ತಾಲಿಬಾನ್‌ ವಿಜಯದ ಸಂಭ್ರಮಕ್ಕೆ ಹೊಮ್ಮಿದ ಸಂಗೀತವು ಮೈದಾನದ ಸುತ್ತ ಪ್ರತಿಧ್ವನಿಸಿತು.

‘ಅಮೆರಿಕವನ್ನು ಸೋಲಿಸಲಾಗಿದೆ, ಅಸಾಧ್ಯ, ಅಸಾಧ್ಯ, ಈಗ ಸಾಧ್ಯ!’ ಎಂಬ ಗೀತೆಯನ್ನು ಎಲ್ಲರೂ ಹಾಡಿದರು.

ಕೆಲವರು ತಾಲಿಬಾನ್‌ ಪರ ಘೋಷಣೆಗಳನ್ನು ಕೂಗಿದರು. ವೇದಿಕೆಯ ಮುಂಭಾಗ ಧಾವಿಸಿದ ಇತರರು ‘ಅಲ್ಲಾಹು ಅಕ್ಬರ್‌’ (ದೇವರು ಶ್ರೇಷ್ಠ) ಎಂದು ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.