
ಢಾಕಾ: ಮಾಜಿ ಪ್ರಧಾನಿ ದಿವಂಗತ ಖಾಲಿದಾ ಜಿಯಾ ಅವರ ಪುತ್ರ ತಾರಿಕ್ ರಹಮಾನ್ ಅವರು ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಕ್ಷದ (ಬಿಎನ್‌ಪಿ) ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಖಾಲಿದಾ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಈ ನೇಮಕ ನಡೆದಿದೆ. ಶುಕ್ರವಾರ ನಡೆದ ಬಿಎನ್‌ಪಿ ಸ್ಥಾಯಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ತಾರಿಕ್ ನೇಮಕವನ್ನು ಬಿಎನ್‌ಪಿ ಪ್ರಧಾನ ಕಾರ್ಯದರ್ಶಿ ಮಿರ್ಜಾ ಫಕ್ರುಲ್ ಇಸ್ಲಾಮ್ ಆಲಂಗೀರ್ ಅವರು ಮಾಧ್ಯಮಗಳಿಗೆ ದೃಢಪಡಿಸಿದರು.
ಮೂರು ಸಲ ಬಾಂಗ್ಲಾದ ಪ್ರಧಾನಿಯಾಗಿದ್ದ ಖಾಲಿದಾ ಅವರು ದೀರ್ಘಕಾಲದ ಅನಾರೋಗ್ಯದಿಂದ ಡಿಸೆಂಬರ್ 30ರಂದು ನಿಧನರಾಗಿದ್ದರು. ‘ಖಾಲಿದಾ ಜಿಯಾ ಅವರ ನಿಧನದ ನಂತರ, ಪಕ್ಷದ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಬಿಎನ್‌ಪಿ ಸಂವಿಧಾನಕ್ಕೆ ಅನುಗುಣವಾಗಿ, ರಾಷ್ಟ್ರೀಯ ಸ್ಥಾಯಿ ಸಮಿತಿಯ ಸಭೆ ನಡೆಸಲಾಯಿತು. ತಾರಿಕ್ ರೆಹಮಾನ್ ಅವರನ್ನು ಬಿಎನ್‌ಪಿ ಅಧ್ಯಕ್ಷರಾಗಿ ಒಮ್ಮತದಿಂದ ನೇಮಕ ಮಾಡಲಾಯಿತು’ ಎಂದು ಬಿಎನ್‌ಪಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.
ಸ್ವಯಂ ಗಡಿಪಾರಾಗಿ 17 ವರ್ಷಗಳ ಬಳಿಕ ಲಂಡನ್‌ನಿಂದ ತವರಿಗೆ ಮರಳಿರುವ 60 ವರ್ಷ ವಯಸ್ಸಿನ ತಾರಿಕ್ ಅವರು ಮುಂಬರುವ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರೆ. ಅವರು ಪ್ರಧಾನಿ ಹುದ್ದೆಗೆ ಪ್ರಮುಖ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ.