ADVERTISEMENT

ತಾರಿಕ್ ರೆಹಮಾನ್: 20 ವರ್ಷಗಳ ಅಜ್ಞಾತವಾಸ, ದೇಶಕ್ಕೆ ಬಂದ ಎರಡೇ ತಿಂಗಳಿಗೆ ಪ್ರಧಾನಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಫೆಬ್ರುವರಿ 2026, 4:44 IST
Last Updated 13 ಫೆಬ್ರುವರಿ 2026, 4:44 IST
<div class="paragraphs"><p>ತಾರಿಕ್ ರೆಹಮಾನ್</p></div>

ತಾರಿಕ್ ರೆಹಮಾನ್

   

ಢಾಕಾ: ಅನೇಕ ವರ್ಷಗಳ ಕಾಲ ದೇಶದಲ್ಲಿ ಇರದೆ, ಯಾವುದೋ ಅಜ್ಞಾತ ಸ್ಥಳದಲ್ಲಿದ್ದು, ದಿಢೀರನೆ ಸ್ವದೇಶಕ್ಕೆ ಮರಳಿ ಅಲ್ಲಿಯ ಆಡಳಿತ ಚುಕ್ಕಾಣಿ ಹಿಡಿಯುವ ಅನೇಕ ಸಿನಿಮಾಗಳನ್ನು ನಾವು ನೋಡಿರುತ್ತೇವೆ. ಅಂತೆಯೇ, ಅನೇಕ ವರ್ಷಗಳ ಕಾಲ ವಿದೇಶದಲ್ಲಿದ್ದು, ಪ್ರಧಾನಿಯಾಗುವ ಅವಕಾಶ ತಾರಿಕ್ ರೆಹಮಾನ್ ಅವರಿಗೆ ಒಲಿದು ಬಂದಿದೆ.

ಸುಮಾರು ಎರಡು ದಶಕಗಳ ಕಾಲ ಬಾಂಗ್ಲಾದೇಶವನ್ನು ತೊರೆದು ಲಂಡನ್‌ನಲ್ಲಿದ್ದ ತಾರಿಕ್ ರೆಹಮಾನ್, ಕಳೆದ ಎರಡು ತಿಂಗಳ ಹಿಂದೆ ಸ್ವದೇಶಕ್ಕೆ ಮರಳಿದ್ದರು. ಬಳಿಕ ಅಲ್ಲಿನ ಪ್ರಮುಖ ರಾಜಕೀಯ ಪಕ್ಷವಾಗಿರುವ ಬಾಂಗ್ಲಾದೇಶ ರಾಷ್ಟ್ರೀಯ ಪಾರ್ಟಿ (ಬಿಎನ್‌ಪಿ) ನೇತೃತ್ವ ವಹಿಸಿಕೊಂಡಿದ್ದರು. ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ, ಬಿಎನ್‌ಪಿ ಸ್ಪಷ್ಟಬಹುಮತ ಪಡೆದು ಅಧಿಕಾರ ಹಿಡಿಯಲಿದೆ.

ADVERTISEMENT

ಮಾತ್ರವಲ್ಲ, ಬಿಎನ್‌ಪಿ ಈಗಾಗಲೇ ಘೋಷಣೆ ಮಾಡಿರುವಂತೆ ತಾರಿಕ್ ರೆಹಮಾನ್ ಅವರು ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ನಿನ್ನೆ (ಗುರುವಾರ) ನಡೆದ ಸಂಸತ್ ಚುನಾವಣೆಯ ಮತ ಎಣಿಕೆ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದ್ದು, ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (ಬಿಎನ್‌ಪಿ) ನೇತೃತ್ವದ ಒಕ್ಕೂಟವು ಇನ್ನೂ ಅನೇಕ ಕ್ಷೇತ್ರಗಳ ಮತ ಎಣಿಕೆ ಬಾಕಿ ಇರುವಂತೆ ಬಹುಮತ ಸಾಧಿಸಿದೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಯಾರು ಈ ತಾರಿಕ್ ರೆಹಮಾನ್?

ರೆಹಮಾನ್ ಅವರು 1965ರ ನವೆಂಬರ್ 20ರಂದು ಢಾಕಾದಲ್ಲಿ ಬಾಂಗ್ಲಾದ ಮಾಜಿ ಪ್ರಧಾನಿ ಖಲೀದಾ ಮತ್ತು ಬಿಎನ್‌ಪಿ ಸಂಸ್ಥಾಪಕ ಅಧ್ಯಕ್ಷ ಜಿಯಾವುರ್ ರೆಹಮಾನ್ ದಂಪತಿಯ ಮಗ. ಬಳಿಕ ಅವರು ಢಾಕಾ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಸಂಬಂಧಗಳನ್ನು ಅಧ್ಯಯನ ವಿಷಯದಲ್ಲಿ ಪದವಿ ಪಡೆದುಕೊಂಡರು. ನಂತರ ಜವಳಿ ಮತ್ತು ಕೃಷಿ ಉತ್ಪನ್ನಗಳ ಮೂಲಕ ವ್ಯವಹಾರ ಪ್ರಾರಂಭಿಸುತ್ತಾರೆ.

2001–2006ರ ಅವಧಿಯಲ್ಲಿ ರೆಹಮಾನ್ ಅವರ ತಾಯಿ ಬಾಂಗ್ಲಾ ಪ್ರಧಾನಿಯಾಗಿದ್ದಾಗ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿ, ಬಾಂಗ್ಲಾದೇಶದ ಮಿಲಿಟರಿ ಸರ್ಕಾರವು ಅವರನ್ನು ಬಂಧನ ಮಾಡಿತ್ತು. 2008ರಲ್ಲಿ ಜೈಲಿನಿಂದ ಬಿಡುಗಡೆಯಾದ ಅವರು, ವೈದ್ಯಕೀಯ ಚಿಕಿತ್ಸೆ ಪಡೆಯುವ ಉದ್ದೇಶದಿಂದಾಗಿ ದೇಶ ತೊರೆದು ಲಂಡನ್‌ಗೆ ತೆರಳುತ್ತಾರೆ.

ಹಸೀನಾ ಆಳ್ವಿಕೆ ಸಂದರ್ಭದಲ್ಲಿ ತಾರಿಕ್, ಭ್ರಷ್ಟಾಚಾರ ಪ್ರಕರಣಗಳ ಕೇಂದ್ರ ಬಿಂದುವಾಗಿದ್ದರು. 2004ರಲ್ಲಿ ನಡೆದ ಗ್ರೆನೇಡ್ ದಾಳಿಯಲ್ಲಿ ಅನೇಕರ ಸಾವು ನೋವುಗಳಿಗೆ ತಾರಿಕ್ ಕಾರಣರಾಗಿದ್ದಾರು ಎಂಂದು 2018ರ ರಾಜಕೀಯ ರ‍್ಯಾಲಿಯೊಂದರಲ್ಲಿ ಹಸೀನಾ ಆರೋಪಿಸಿದ್ದರು.

ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ತಾರಿಕ್, ಇದೊಂದು ರಾಜಕೀಯ ಪ್ರೇರಿತ ಆರೋಪ ಎಂದಿದ್ದಾರೆ. ಹಸೀನಾ ಪದಚ್ಯುತಿಗೊಂಡ ಬಳಿಕ ಅವರ ಮೇಲಿದ್ದ ಎಲ್ಲಾ ಪ್ರಕರಣಗಳು ಖುಲಾಸೆಗೊಂಡಿವೆ.

2024ರ ಅಗಸ್ಟ್‌ನಲ್ಲಿ ಬಿಎನ್‌ಪಿಯ ಶತ್ರು ಪಕ್ಷವಾದ ಶೇಖ್ ಹಸೀನಾ ಅವರ ಅವಾಮಿ ಲೀಗ್‌ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಅಲ್ಲಿನ ಯುವಕರು ದಂಗೆ ಏಳುತ್ತಾರೆ. ಇದಾದ ಬಳಿಕ ಸರ್ಕಾರ ವಿಸರ್ಜನೆಗೊಂಡು, ಮಧ್ಯಂತರ ಸರ್ಕಾರ ರಚನೆಯಾಗುತ್ತದೆ.

ಸುಮಾರು 20 ವರ್ಷಗಳ ಬಳಿಕ ತಾರಿಕ್ ಅವರು 2025ರ ಕ್ರಿಸ್‌ಮಸ್‌ಗೆ ಸ್ವದೇಶಕ್ಕೆ ಮರಳಿದಾಗ, ಕುಟುಂಬ ಸದಸ್ಯರು ಅವರನ್ನು ಅದ್ಧೂರಿಯಾಗಿ ಬರಮಾಡಿಕೊಂಡರು.

ಬಾಂಗ್ಲಾದೇಶಕ್ಕೆ ಮರಳಿದ ಬಳಿಕ ಸುದ್ದಿ ಸಂಸ್ಥೆಯೊಂದರ ಜೊತೆ ಮಾತನಾಡಿದ ಅವರು, ‘ನಾವು ವಿಮಾನ ಇಳಿದಾಗಿನಿಂದ ಪ್ರತಿ ನಿಮಿಷವೂ ಹೇಗೆ ಕಳೆದಿದ್ದೇವೆಂದು ನನಗೆ ತಿಳಿಯುತ್ತಿಲ್ಲ’ ಎಂದು ಬಾವುಕರಾಗಿ ಮಾತನಾಡಿದ್ದಾರೆ.

ತಾರಿಕ್ ರೆಹಮಾನ್ ಅವರು ಮೊದಲಿನಂತೆ ಉದ್ವೇಗಕ್ಕೆ ಒಳಗಾಗಿ ಪ್ರಚೋದನಕಾರಿ ಭಾಷಣ ಮಾಡದೆ, ಶಾಂತಿಯುತ ಭಾಷಣಗಳನ್ನು ಮಾಡುವ ಮೂಲಕ ಜನರನ್ನು ಸೆಳೆಯುತ್ತಿದ್ದಾರೆ.

ಹಾಗೆಯೇ, ಸೇಡಿನ ರಾಜಕಾರಣದ ಕುರಿತಾಗಿಯೂ ಮಾತನಾಡಿರುವ ತಾರಿಕ್, ‘ಸೇಡು ಯಾರಿಗೆ ಏನನ್ನು ತಂದುಕೊಡುತ್ತದೆ? ಸೇಡಿನ ರಾಜಕಾರಣವನ್ನು ಈ ದೇಶದ ಜನ ಮರೆತುಬಿಡಬೇಕು. ಸೇಡು ಯಾರಿಗೂ ಒಳಿತನ್ನು ಮಾಡುವುದಿಲ್ಲ, ನಮಗೆ ಬೇಕಾಗಿರುವುದು ಶಾಂತಿ ಮತ್ತು ಸ್ಥಿರತೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.