ADVERTISEMENT

ಢಾಕಾಗೆ ಮರಳಿದ ತಾರಿಕ್‌ ರೆಹಮಾನ್‌ಗೆ ಅದ್ದೂರಿ ಸ್ವಾಗತ

17 ವರ್ಷಗಳಿಂದ ಸ್ವಯಂ ಗಡಿಪಾರಾಗಿ ಲಂಡನ್‌ನಲ್ಲಿ ನೆಲಸಿದ್ದ ಬಿಎನ್‌ಪಿ ನಾಯಕ

ಪಿಟಿಐ
Published 25 ಡಿಸೆಂಬರ್ 2025, 16:20 IST
Last Updated 25 ಡಿಸೆಂಬರ್ 2025, 16:20 IST
ಬಾಂಗ್ಲಾದೇಶ ನ್ಯಾಷನಲ್‌ ಪಕ್ಷದ ಹಂಗಾಮಿ ಅಧ್ಯಕ್ಷ ತಾರೀಕ್‌ ರೆಹಮಾನ್‌ ಅವರು ಗುರುವಾರ ರಾಜಧಾನಿ ಢಾಕಾ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಬೆಂಬಲಿಗರತ್ತ ಕೈಬೀಸಿದರು –ಎಎಫ್‌ಪಿ ಚಿತ್ರ
ಬಾಂಗ್ಲಾದೇಶ ನ್ಯಾಷನಲ್‌ ಪಕ್ಷದ ಹಂಗಾಮಿ ಅಧ್ಯಕ್ಷ ತಾರೀಕ್‌ ರೆಹಮಾನ್‌ ಅವರು ಗುರುವಾರ ರಾಜಧಾನಿ ಢಾಕಾ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಬೆಂಬಲಿಗರತ್ತ ಕೈಬೀಸಿದರು –ಎಎಫ್‌ಪಿ ಚಿತ್ರ    

ಢಾಕಾ: 17 ವರ್ಷಗಳಿಂದ ಸ್ವಯಂ ಗಡಿಪಾರಾಗಿ ಲಂಡನ್‌ನಲ್ಲಿ ನೆಲಸಿದ್ದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಕ್ಷದ(ಬಿಎನ್‌ಪಿ)  ಹಂಗಾಮಿ ಅಧ್ಯಕ್ಷ ತಾರಿಕ್‌ ರೆಹಮಾನ್‌ ಅವರು ಗುರುವಾರ ತವರಿಗೆ ಬಂದಿಳಿದರು. 

ಪತ್ನಿ ಜುಬೈದಾ, ಮಗಳು ಝೈಮಾ ಜೊತೆಗೆ ಢಾಕಾದ ಹಜರತ್‌ ಶಾಹ ಜಲಾಲ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಸ್ವಾಗತಿಸಿದರು.

ಬಿಎನ್‌ಪಿ ಕಾರ್ಯದರ್ಶಿ ಮಿರ್ಜಾ ಫಖ್ರುಲ್ ಇಸ್ಲಾಂ ಆಲಂಗೀರ್‌ ಹಾಗೂ ಪಕ್ಷದ ಹಿರಿಯ ನಾಯಕರು ಈ ವೇಳೆ ಉಪಸ್ಥಿತರಿದ್ದರು. ಇದೇ ಫೆಬ್ರುವರಿ 12ರಂದು ಬಾಂಗ್ಲಾದೇಶ ಸಂಸತ್ತಿಗೆ ಚುನಾವಣೆ ನಡೆಯಲಿದ್ದು, ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತುಂಬಿದೆ.

ADVERTISEMENT

ಗುಂಡು ನಿರೋಧಕ ಬಸ್‌ನಲ್ಲಿ ವಿಮಾನ ನಿಲ್ದಾಣದಿಂದ ಹೊರಟ ತಾರಿಕ್‌ ಅವರು, ರಸ್ತೆಯ ಇಕ್ಕೆಲಗಳಲ್ಲಿ ನಿಂತ ಲಕ್ಷಾಂತರ ಅಭಿಮಾನಿಗಳತ್ತ ಕೈ ಬೀಸಿ ಸಾಗಿದರು.

ವಿಮಾನ ನಿಲ್ದಾಣದಿಂದ ಹೊರಡುವ ಮುನ್ನ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್‌ ಯೂನಸ್‌ ಅವರಿಗೆ ದೂರುವಾಣಿ ಕರೆ ಮಾಡಿ ಮಾತನಾಡಿದ ಅವರು, ತವರಿಗೆ ಬರಲು ಸೂಕ್ತ ಭದ್ರತೆ ವ್ಯವಸ್ಥೆ ಕಲ್ಪಿಸಿದ್ದಕ್ಕೆ ಧನ್ಯವಾದ ಸಲ್ಲಿಸಿದರು.

‘ವೈಯಕ್ತಿಕ ಹಾಗೂ ಕುಟುಂಬಸ್ಥರ ಪರವಾಗಿ ನಾನು ಧನ್ಯವಾದ ಸಲ್ಲಿಸುತ್ತೇನೆ. ವಿಶೇಷವಾಗಿ ನನ್ನ ಭದ್ರತೆಗೆ ತೆಗೆದುಕೊಂಡ ಕ್ರಮಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ’ ಎಂದು ತಿಳಿಸಿದರು ಎಂದು ಬಿಎನ್‌ಪಿಯು ಬಿಡುಗಡೆಗೊಳಿಸಿದ ವಿಡಿಯೊದಲ್ಲಿ ತಿಳಿಸಲಾಗಿದೆ.

ತಾರೀಕ್‌ (60) ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ(80) ಅವರ ಮಗ. ಬಾಂಗ್ಲಾದಲ್ಲಿ ಬದಲಾದ ರಾಜಕೀಯ ಸನ್ನಿವೇಶದ ಪರಿಣಾಮ, ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಹುದ್ದೆಯ ಆಕಾಂಕ್ಷಿಯಾಗಿದ್ದಾರೆ. ತಾರೀಕ್‌ ಆಗಮನದಿಂದ ಜಮಾತ್‌–ಇ–ಇಸ್ಲಾಮಿ ಪಕ್ಷಕ್ಕೆ ಬಿಎನ್‌‍ಪಿ ಪ್ರಬಲ ಸ್ಪರ್ಧೆ ಒಡ್ಡಲಿದೆ ಎಂದು ಹೇಳಲಾಗಿದೆ.

ರಾಜಧಾನಿಯಲ್ಲಿ ಬೃಹತ್‌ ಮೆರವಣಿಗೆ ಬಳಿಕ ತಾರಿಕ್‌ ಅವರು ಢಾಕಾದ ಎವರ್‌ಕೇರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಖಲೀದಾ ಜಿಯಾ ಅವರನ್ನು ಭೇಟಿಯಾದರು. ಮೂರು ಅವಧಿಗೆ ಪ್ರಧಾನಿಯಾಗಿರುವ ಅವರು ಕೆಲವು ದಿನಗಳಿಂದ ತುರ್ತು ನಿಗಾ ಘಟಕ (ಐಸಿಯು)ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

4 ಸಾವಿರ ಮಂದಿ ಸೇನಾ ಸಿಬ್ಬಂದಿ ಹಾಗೂ ಬಾಂಗ್ಲಾದೇಶ ಅರೆ ಸೇನಾ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.  ‘ನಾವು ಬಹಿರಂಗ ಹಾಗೂ ರಹಸ್ಯ ಭದ್ರತೆಗಾಗಿ ಕ್ರಮ ಕೈಗೊಂಡಿದ್ದೇವು’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ವಿಮಾನಯಾನ ‍ಪ್ರಾಧಿಕಾರದ ಅಧಿಕಾರಿಗಳು ವಿಮಾನ ನಿಲ್ದಾಣ ಹಾಗೂ ಎವರ್‌ಕೇರ್‌ ಆಸ್ಪತ್ರೆಯ ಸುತ್ತಲೂ ಡ್ರೋನ್‌ ಹಾರಾಟ ಹಾಗೂ ಛಾಯಾಚಿತ್ರ ತೆಗೆಯುವುದನ್ನು ನಿಷೇಧಿಸಿದ್ದರು. 

ಢಾಕಾದಲ್ಲಿ ಬಿಎನ್‌ಪಿ ತಾರಿಕ್‌ ರೆಹಮಾನ್‌ ಅವರಿದ್ದ ಬಸ್‌ ಸುತ್ತವರಿದ ಅಪಾರ ಸಂಖ್ಯೆಯ ಅಭಿಮಾನಿಗಳು  ಎಎಫ್‌ಪಿ ಚಿತ್ರ

ಪ್ರಧಾನಿ ರೇಸ್‌ನಲ್ಲಿ ಮುಂಚೂಣಿ

ಬಿಎನ್‌ಪಿಯ ಉತ್ತರಾಧಿಕಾರಿಯಾಗಿ ತಾರಿಕ್‌ ಅಧಿಕಾರ ವಹಿಸಿಕೊಳ್ಳಲಿದ್ದು ರಾಜಕೀಯ ಅಸ್ಥಿರತೆ ಸೃಷ್ಟಿಸಿರುವ ಬಾಂಗ್ಲಾದಲ್ಲಿ ಹೊಸ ಅಲೆ ಸೃಷ್ಟಿಸಿದೆ.  ಶೇಖ್‌ ಹಸೀನಾ ನೇತೃತ್ವದ ಅವಾಮಿ ಲೀಗ್‌ ಸರ್ಕಾರದ ವಿರುದ್ಧ ನಡೆದ ಹೋರಾಟದಲ್ಲಿ ಶರೀಫ್‌ ಉಸ್ಮಾನ್‌ ಹಾದಿ (32) ಹತ್ಯೆಯಾಗಿರುವ ಹಿನ್ನೆಲೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಶೇಖ್‌ ಹಸೀನಾ ನೇತೃತ್ವದ ಅವಾಮಿ ಲೀಗ್‌ ಪಕ್ಷವನ್ನು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧಿಸಲಾಗಿದೆ. ಹೀಗಾಗಿ ಬಿಎನ್‌ಪಿ ಪಕ್ಷವು ಅಧಿಕಾರ ಹಿಡಿಯುವ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. 2001–2006ರವರೆಗೆ ಬಿಎನ್‌ಪಿಯ ಮೈತ್ರಿ ಪಕ್ಷವಾಗಿ ಜಮಾತ್‌–ಇ–ಇಸ್ಲಾಮಿ ಪಕ್ಷವು ಅಧಿಕಾರ ನಡೆಸಿತ್ತು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಎನ್‌‍ಪಿ ಹಾಗೂ ಜಮಾತ್‌–ಇ–ಇಸ್ಲಾಮಿ ಪಕ್ಷವು ಪರಸ್ಪರ ಸೆಣಸಾಟದಲ್ಲಿ ತೊಡಗಿವೆ.  ‘ತಾಯಿಯ ಸಂಕಷ್ಟದ ಸಂದರ್ಭದಲ್ಲಿ ಮಗನು ಹತ್ತಿರದಲ್ಲಿರಬೇಕು ಎನ್ನುವುದು ‍ಪ್ರತಿಯೊಬ್ಬರ ಬಯಕೆಯಾಗಿದೆ’ ಎಂದು ಬಿಎನ್‌ಪಿಯು ತಾರಿಕ್‌ ತವರಿಗೆ ಮರಳಿದ್ದನ್ನು ಸಮರ್ಥಿಸಿಕೊಂಡಿದೆ. 

‘ಕಾನೂನು– ಸುವ್ಯವಸ್ಥೆ ನಿಯಂತ್ರಿಸಲು ಎಲ್ಲರೂ ಕೈ ಜೋಡಿಸಿ’

‘ದೇಶದಲ್ಲಿ ಕಾನೂನು–ಸುವ್ಯವಸ್ಥೆ ಕಾಪಾಡಲು ಎಲ್ಲರೂ ಕೈ ಜೋಡಿಸಬೇಕು’ ಎಂದು ಬಿಎನ್‌ಪಿಯ ಹಂಗಾಮಿ ಅಧ್ಯಕ್ಷ ತಾರಿಕ್‌ ರೆಹಮಾನ್‌ ಕರೆ ನೀಡಿದ್ದಾರೆ. ಢಾಕಾಗೆ ಬಂದಿಳಿದ ಅವರು ಬೃಹತ್‌ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು ‘ಯಾವುದೇ ರಾಜಕೀಯ ಪಕ್ಷವಿರಲಿ ಯಾವುದೇ ಧರ್ಮವನ್ನು ನಂಬಲಿ ಎಲ್ಲರೂ ಪಕ್ಷಪಾತವಿಲ್ಲದೇ ದೇಶದಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡಲು ಕೈ ಜೋಡಿಸಬೇಕು’ ಎಂದು ಕರೆ ನೀಡಿದರು. ಅಮೆರಿಕದ ನಾಗರಿಕ ಹಕ್ಕುಗಳ ಹೋರಾಟಗಾರ ಮಾರ್ಟಿನ್ ಲೂಥರ್‌ ಕಿಂಗ್‌ ಪ್ರಸಿದ್ಧ ಹೇಳಿಕೆಯನ್ನು ಉಲ್ಲೇಖಿಸಿದ ‘ನನಗೆ ಒಂದು ಕನಸು ಇದೆ’ ಎಂದು ಮಾತು ಆರಂಭಿಸಿದರು.

‘ನನ್ನ ದೇಶದ ಜನರಿಗಾಗಿ ನನ್ನ ದೇಶಕ್ಕಾಗಿ ನನ್ನ ಬಳಿ ಒಂದು ಯೋಜನೆಯಿದೆ. ಇದು ಜನರಿಗಾಗಿ ರೂಪಿಸಿದ ಯೋಜನೆಯಾಗಿದೆ. ದೇಶದ ಅಭಿವೃದ್ಧಿಗಾಗಿ ರೂಪಿಸಿದ ಯೋಜನೆಯಾಗಿದ್ದು ಇದನ್ನು ಜಾರಿಗೊಳಿಸಲು ಜನರ ಸಹಕಾರ ಅತ್ಯಗತ್ಯವಾಗಿದೆ. ನೀವು ನನ್ನ ಜೊತೆಗಿದ್ದರೆ ದೇವರ ಇಚ್ಚೆಯಿದ್ದರೆ ನಾವೆಲ್ಲರೂ ಸೇರಿಕೊಂಡು ಇದನ್ನು ಜಾರಿಗೆ ತರಬಹುದು’ ಎಂದು ತಾರಿಕ್‌ ಹೇಳಿದ್ದಾರೆ ಎಂದು ಬಾಂಗ್ಲಾದೇಶದ ಸರ್ಕಾರಿ ಸ್ವಾಮ್ಯದ ‘ಬಾಂಗ್ಲಾದೇಶ ಸಂಗಾಬಾದ್‌ ಸಂಗಸ್ಥಾ’ ವರದಿ ಮಾಡಿದೆ.  ‘ಜಾತಿ ಮತ ನಂಬಿಕೆಗಳನ್ನು ಲೆಕ್ಕಿಸದೇ ಎಲ್ಲರಿಗೂ ಸುರಕ್ಷಿತ ಬಾಂಗ್ಲಾದೇಶ ನಿರ್ಮಿಸಲು ಪಣತೊಡುತ್ತೇನೆ.ಮುಸಲ್ಮಾನರು ಹಿಂದೂ ಬೌದ್ಧ ಕ್ರೈಸ್ತರೇ ಇರಲಿ  ಪ್ರತಿ ಮಹಿಳೆ ಮಕ್ಕಳು ಕೂಡ ಮನೆಯಿಂದ ಸುರಕ್ಷಿತವಾಗಿ ಹೊರಟು ಸುರಕ್ಷಿತವಾಗಿ ತಲುಪಲು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದ್ದಾರೆ.

ಹಿಂದೂಗಳ ಮನೆಗಳ ಮೇಲೆ ದಾಳಿ; ಸುಳಿವು ನೀಡಿದವರಿಗೆ ಬಹುಮಾನ ಘೋಷಣೆ

‘ಬಂದರು ನಗರಿ ಚಟಗಾಂವ್‌ ಗ್ರಾಮದಲ್ಲಿ ಹಿಂದೂ ಧರ್ಮೀಯರ ಮನೆಗಳ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿದ ಪ್ರಕರಣದ ಕುರಿತು ಸುಳಿವು ನೀಡಿದವರಿಗೆ ಬಹುಮಾನ ನೀಡಲಾಗುವುದು’ ಎಂದು ಬಾಂಗ್ಲಾದೇಶ ಪೊಲೀಸರು ಘೋಷಿಸಿದ್ದಾರೆ. ನಗರದ ಹೊರವಲಯದಲ್ಲಿರುವ ರೌಜನ್‌ ಪ್ರದೇಶದಲ್ಲಿರುವ ಸುಖ್‌ ಶಿಲ್‌ ಅನಿಲ್‌ ಶಿಲ್‌ ಮನೆಗಳಿಗೆ ಭೇಟಿ ನೀಡಿದ ಚಟಗಾಂವ್‌ ವಲಯದ ಪೊಲೀಸ್‌ ವಿಭಾಗದ ಮುಖ್ಯಸ್ಥ ಅಹಸಾನ್‌ ಹಬೀನ್‌ ಹಾನಿಯ ಪರಿಶೀಲನೆ ನಡೆಸಿದರು.  ಬಹುಮಾನ ಘೋಷಿಸಿದ್ದು ನಗದು ಮೊತ್ತ ಎಷ್ಟು ಎಂದು ತಿಳಿಸಿಲ್ಲ. ವರದಿಯ ಪ್ರಕಾರ ಅಪರಿಚಿತ ದುಷ್ಕರ್ಮಿಗಳು ಮಂಗಳವಾರ ರಾತ್ರಿ ವೇಳೆಗೆ ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಿದ್ದರು. ಮನೆಯಲ್ಲಿದ್ದ ನಿವಾಸಿಗಳು ಹೊರಬಂದಿದ್ದರಿಂದ ಅಪಾಯದಿಂದ ಪಾರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.