ADVERTISEMENT

ಹಾಂಗ್‌ಕಾಂಗ್: ಪ್ರತಿಭಟನಕಾರರ ಚದುರಿಸಲು ಅಶ್ರುವಾಯು

ಏಜೆನ್ಸೀಸ್
Published 24 ಮೇ 2020, 16:02 IST
Last Updated 24 ಮೇ 2020, 16:02 IST
ಪ್ರತಿಭಟನಾಕಾರರನ್ನು ಬಂಧಿಸಿದ ಪೊಲೀಸರು   ಎಪಿ/ಪಿಟಿಐ
ಪ್ರತಿಭಟನಾಕಾರರನ್ನು ಬಂಧಿಸಿದ ಪೊಲೀಸರು   ಎಪಿ/ಪಿಟಿಐ   

ಹಾಂಗ್‌ಕಾಂಗ್‌/ಬೀಜಿಂಗ್‌: ಚೀನಾ ಜಾರಿಗೊಳಿಸಲು ಉದ್ದೇಶಿಸಿರುವ ರಾಷ್ಡ್ರೀಯ ಭದ್ರತಾ ಮಸೂದೆಯನ್ನು ವಿರೋಧಿಸಿ ಪ್ರತಿಭಟನೆಗಿಳಿದವರನ್ನು ಚದುರಿಸಲು ಪೊಲೀಸರು ಭಾನುವಾರ ಅಶ್ರುವಾಯು ಸಿಡಿಸಿ, ಜಲಫಿರಂಗಿ ಪ್ರಯೋಗಿಸಿದರು.

ಇಲ್ಲಿನ ಪ್ರಮುಖ ವಾಣಿಜ್ಯ ಪ್ರದೇಶದಲ್ಲಿರುವ ಕಾಸ್‌ವೇ ಬೇ ಬಳಿ ಜಮಾಯಿಸಿದ ಹೋರಾಟಗಾರರು, ‘ಹಾಂಗ್‌ಕಾಂಗ್‌ ಜೊತೆ ನಿಲ್ಲಿ’, ‘ಹಾಂಗ್‌ಕಾಂಗ್‌ ವಿಮೋಚನೆಗೊಳಿಸಿ’ ಎಂಬ ಘೋಷಣೆಗಳನ್ನು ಕೂಗಿ, ಉದ್ದೇಶಿತ ಕಾಯ್ದೆಯನ್ನು ವಿರೋಧಿಸಿದರು.

ಮೊದಲು ನೀಲಿ ಬಣ್ಣದ ಧ್ವಜವನ್ನು ಬೀಸಿದ ಪೊಲೀಸರು, ಪ್ರತಿಭಟನೆ ಕೈಬಿಟ್ಟು, ಜಾಗ ಖಾಲಿ ಮಾಡಿ ಎಂಬ ಸಂದೇಶ ರವಾನಿಸಿದರು. ಪ್ರತಿಭಟನಕಾರರು ಇದಕ್ಕೂ ಜಗ್ಗದಿದ್ದಾಗ ಹಲವು ಸುತ್ತು ಅಶ್ರವಾಯು ಸಿಡಿಸಿದರಲ್ಲದೇ, ಜಲಫಿರಂಗಿ ಬಳಸಿ ಹೋರಾಟಗಾರರನ್ನು ಚದುರಿಸಿದರು. 120ಕ್ಕೂ ಅಧಿಕ ಪ್ರತಿಭಟನಕಾರರನ್ನು ಬಂಧಿಸಲಾಗಿದೆ.

ADVERTISEMENT

ಉದ್ದೇಶಿತ ಮಸೂದೆಯು ಅರೆಸ್ವಾಯತ್ತ ಹಾಂಗ್‌ಕಾಂಗ್‌ನ ವಿದ್ಯಮಾನಗಳಲ್ಲಿ ವಿದೇಶಗಳು ಹಸ್ತಕ್ಷೇಪ ಮಾಡುವುದನ್ನು ತಡೆಯಲಿದೆ. ಪ್ರತ್ಯೇಕತಾವಾದವನ್ನು ಈ ಕಾಯ್ದೆ ನಿಷೇಧಿಸುತ್ತದೆ.

ಮೇ 28ರಂದು ನಡೆಯುವ ಅಧಿವೇಶನದಲ್ಲಿ ಚೀನಾ ಈ ಮಸೂದೆಯನ್ನು ಅಂಗೀಕರಿಸುವ ನಿರೀಕ್ಷೆ ಇದೆ. ಕಾಯ್ದೆಯಾಗಿ ಜಾರಿಯಾದರೆ, ಚೀನಾದ ಸರ್ಕಾರಿ ಸಂಸ್ಥೆಗಳ ಕಚೇರಿಗಳನ್ನು ಹಾಂಗ್‌ಕಾಂಗ್‌ನಲ್ಲಿ ಸ್ಥಾಪಿಸಲು ಸಾಧ್ಯವಾಗಲಿದೆ. ಪ್ರಜಾಪ್ರಭುತ್ವ ಪರ ಎಂದು ಪರಿಗಣಿಸುವ ಚಟುವಟಿಕೆಗಳಲ್ಲಿ ತೊಡಗಿದವರನ್ನು ಬಂಧಿಸಲೂ ಈ ಕಾಯ್ದೆ ಅನುವು ಮಾಡಿಕೊಡುತ್ತದೆ.

ಮಸೂದೆಯನ್ನು ಸಮರ್ಥಿಸಿಕೊಂಡಿರುವ ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ, ಈ ವಿಷಯದಲ್ಲಿ ಅಂತರರಾಷ್ಟ್ರೀಯ ಹಸ್ತಕ್ಷೇಪ ಸಲ್ಲದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.